ಜಿಲ್ಲೆಯಲ್ಲಿ ಎದುರಾಗಿದೆ ರಕ್ತದ ಅಭಾವ: ಯುವ ಪ್ರಶಸ್ತಿ ಪುರಸ್ಕೃತ ಲಂಕೇಶ್ ಆತಂಕ

1 (3)
Published on

ಮಂಡ್ಯ: ಜಿಲ್ಲೆಯ ರಕ್ತದ ಅಭಾವ ಉಂಟಾಗಿದೆ. ಪರಿಣಾಮ ರೋಗಿಗಳು ಮತ್ತು ಸಂಬಂಧಿಕರು ಪರದಾಡುವಂತಾಗಿದೆ ಎಂದು ಯುವ ಪ್ರಶಸ್ತಿ ಪುರಸ್ಕೃತ ಎಂ.ಸಿ.ಲಂಕೇಶ್ ಮಂಗಲ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ಮಂಗಲ ಗ್ರಾಮದಲ್ಲಿ ಜೈ ಭೀಮ್ ಯುವಕರ ಸಂಘ ಮತ್ತು ನೆಲದನಿ ಬಳಗ ಮಂಗಲ ಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತ್ಯುತ್ಸವ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಕೋವಿಡ್-19ರ ಬಳಿಕ ಸಂಘ ಮತ್ತು ಸಂಸ್ಥೆಗಳು ನಡೆಸುತ್ತಿದ್ದ ರಕ್ತದಾನ ಕಾರ್ಯಕ್ರಮಗಳು ಸಮರ್ಪಕವಾಗಿ ನಡೆದಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ರಕ್ತದ ಕೊರತೆ ಹೆಚ್ಚಾಗುತ್ತಿದ್ದು, ಮಿಮ್ಸ್ ರಕ್ತನಿಧಿ ಕೇಂದ್ರವು ರಕ್ತದಾನಿಗಳ ನಿರೀಕ್ಷೆಯಲ್ಲಿದೆ ಎಂದರು.

ಪ್ರತಿ ತಿಂಗಳಲ್ಲಿ ಸಾವಿರಕ್ಕೂ ಹೆಚ್ಚಿನ ರಕ್ತದ ಸಂಗ್ರಹವಾಗುತ್ತಿತ್ತು. ಸ್ವಯಂ ಪ್ರೇರಿತ ರಕ್ತದಾನಿಗಳು ಮತ್ತು ವಿದ್ಯಾರ್ಥಿಗಳಿಂದ ಶಿಬಿರ ಆಯೋಜನೆಯಾಗುತ್ತಿದ್ದವು. ಆದರೆ ಪ್ರಸ್ತುತ ರಕ್ತ ಸಂಗ್ರಹಣೆ ಶೇ.60ರಷ್ಟು ಕಡಿಮೆಯಾಗಿದೆ. ಇದು ತುರ್ತು ಅವಶ್ಯಕ. ಸರ್ಜರಿ ಹೊರತಾಗಿ ಇತರ ಸಣ್ಣ ಸರ್ಜರಿಗೆ ರಕ್ತದ ಅಭಾವವಾಗಿದೆ. ಯುವ ಜನತೆ ರಕ್ತದಾನ ಮಾಡಿ ಜೀವ ಉಳಿಸುವ ಮಾನವೀಯತೆ ಬೆಳೆಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಆಧುನಿಕ ಕಾಲಘಟ್ಟದಲ್ಲಿ ಮಿಮ್ಸ್ ರಕ್ತನಿಧಿ ಕೇಂದ್ರಕ್ಕೆ ಸಂಚಾರ ರಕ್ತ ಸಂಗ್ರಹಿಸುವ ಮತ್ತು ಸಾಗಿಸುವ ವಾಹನವು ಲಭ್ಯವಾಗಿದೆ. ಮಂಗಲ ಗ್ರಾಮದಲ್ಲಿ ಪ್ರಥಮ ಬಾರಿಗೆ ವಾಹನದ ಒಳಗಡೆ 25ಕ್ಕೂ ಹೆಚ್ಚು ರಕ್ತದಾನಿಗಳಿಂದ ರಕ್ತವನ್ನು ಸಂಗ್ರಹಿಸಲಾಯಿತು. ಗ್ರಾಮೀಣ ಭಾಗದಲ್ಲಿ ರಕ್ತದಾನ ಮಾಡಿ ಮಾವೀಯತೆ ಮೆರೆಯುವ ಸಹೃದಯಿಗಳು ಹೆಚ್ಚಾಗಬೇಕಿದೆ ಎಂದು ಕಿವಿಮಾತೇಳಿದರು.

ರಕ್ತನಿಧಿ ಕೇಂದ್ರದ ವೈದ್ಯೆ ಡಾ.ಆಯುಷಾ, ಸಿಬ್ಬಂದಿ ಜ್ಞಾನೇಶ್, ಧನಂಜಯ್, ಗ್ರಾಮ ಪಂಚಾಯಿತಿ ಸದಸ್ಯರಾದ ಕುಮಾರ್‌ಗೌಡ, ಮಹದೇವಸ್ವಾಮಿ, ಮಧು, ಶಿವಲಿಂಗ, ದೇವರಾಜು, ವಿಕಾಸ್, ಸನತ್‌ಕುಮಾರ್, ಮಲ್ಲೇಶ್, ಶಿವರಾಂ, ಕೀರ್ತಿಕುಮಾರ್, ಸುನೀಲ್ ಇತರರಿದ್ದರು.

ಇದೇ ಸಂದರ್ಭದಲ್ಲಿ ರಕ್ತದಾನ ಮಾಡಲು ಬಂದ ಯುವಕರ ಆರೋಗ್ಯ ತಪಾಸಣೆ ನಡೆಸಲಾಯಿತು. ಅಂತೆಯೇ ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರಗಳನ್ನು ನೀಡಿ ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net