ಉಡುಪಿ ಜಿಲ್ಲೆಯಲ್ಲಿ ರಕ್ತ ಕೊರತೆ

Blood donate
Published on

ಉಡುಪಿ: ಲಾಕ್‌ಡೌನ್ ಪರಿಣಾಮ ಜಿಲ್ಲೆಯಲ್ಲಿ ಮಾರ್ಚ್‌ನಿಂದ ಮೇ ವರೆಗೆ ನಿಗದಿಯಾಗಿದ್ದ ಎಲ್ಲ ರಕ್ತದಾನ ಶಿಬಿರಗಳು ರದ್ದಾಗಿರುವ ಕಾರಣ ರಕ್ತದ ಕೊರತೆ ಉಂಟಾಗಿದೆ. ಏ.19ಕ್ಕೆ ಜಿಲ್ಲಾ ರಕ್ತನಿಧಿ ಕೇಂದ್ರದಲ್ಲಿ ಹಳೇ ಸ್ಟಾಕ್ ಪೂರ್ತಿ ಖಾಲಿಯಾಗಿದ್ದು, ರಕ್ತ ಅವಶ್ಯಕತೆ ಇರುವವರು ಬದಲಿ ರಕ್ತ ನೀಡುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಮಾರ್ಚ್ ತಿಂಗಳಲ್ಲಿ 562 ಯುನಿಟ್ ರಕ್ತ ಸಂಗ್ರಹಿಸಲಾಗಿದ್ದು, ಬೇಡಿಕೆಗೆ ಅನುಗುಣವಾಗಿ 798 ಯುನಿಟ್ ರಕ್ತ ವಿತರಿಸಲಾಗಿದೆ. ಏಪ್ರಿಲ್ ತಿಂಗಳಲ್ಲಿ ಇದುವರೆಗೆ ಕೇವಲ 100 ಯುನಿಟ್ ಮಾತ್ರ ಸಂಗ್ರಹಿಸಲಾಗಿದೆ. ತುರ್ತು ಸಂದರ್ಭ ರಕ್ತದಾನಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ರಕ್ತ ಪಡೆಯಲಾಗುತ್ತಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ 787, ಏಪ್ರಿಲ್‌ನಲ್ಲಿ 302, ಮೇ 330 ಸೇರಿ ಒಟ್ಟು ಮೂರು ತಿಂಗಳಲ್ಲಿ 1419 ಯುನಿಟ್ ರಕ್ತ ಸಂಗ್ರಹಿಸಲಾಗಿತ್ತು.

800 ಯುನಿಟ್ ಬೇಡಿಕೆ: ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದಲ್ಲಿ ಸಾಮಾನ್ಯ ದಿನಗಳಲ್ಲಿ ತಿಂಗಳಿಗೆ 800 ಯುನಿಟ್ ರಕ್ತಕ್ಕೆ ಬೇಡಿಕೆ ಇದೆ. ಅದರೆ ಲಾಕ್‌ಡೌನ್ ಪರಿಣಾಮ ಅಪಘಾತಗಳ ಸಂಖ್ಯೆ ಕಡಿಮೆಯಾಗಿರುವುದು ವರದಾನವಾಗಿದೆ. ಜತೆಗೆ ತುರ್ತು ಅಗತ್ಯ ಹೊರತು ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮುಂದೂಡಲಾಗಿದೆ. ಪ್ರಸ್ತುತ ಹೆರಿಗೆ ಮತ್ತು ಬಿದ್ದು ಗಾಯಗೊಂಡವರಿಗೆ, ತುರ್ತು ಶಸ್ತ್ರಚಿಕಿತ್ಸೆಗಾಗಿ ರಕ್ತದ ಅವಶ್ಯಕತೆ ಇದೆ.

‘ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆ ಇದೆ. ರಕ್ತದಾನಿಗಳಿಗೆ ನಿಷೇಧಾಜ್ಞೆಯ ಸಮಯದಲ್ಲಿ ಬಂದು ಹೋಗಲು ಪಾಸ್ ವ್ಯವಸ್ಥೆ ಮಾಡಲಾಗಿದೆ. ರಕ್ತನಿಧಿ ಕೇಂದ್ರ ಸಂಪರ್ಕ ಸಂಖ್ಯೆ 0820 2531633 ಕರೆ ಮಾಡಿ ಹೆಸರು ನೋಂದಾಯಿಸಿದರೆ ದಾನಿಗಳ ವಾಟ್ಸಪ್‌ಗೆ ಪಾಸ್ ರವಾನಿಸುತ್ತಾರೆ’ ಎಂದು ಸಮಾಜಸೇವಕ ವಿಶು ಶೆಟ್ಟಿ ತಿಳಿಸಿದ್ದಾರೆ.

ಕುಂದಾಪುರದಲ್ಲಿ 160 ಯುನಿಟ್ ಸಂಗ್ರಹ: : ಕುಂದಾಪುರ ರೆಡ್‌ಕ್ರಾಸ್ ಬ್ಲಡ್‌ಬ್ಯಾಂಕ್‌ನಲ್ಲಿ 2 ದಿನದಲ್ಲಿ 160 ಯುನಿಟ್ ರಕ್ತ ಸಂಗ್ರಹಿಸಲಾಗಿದೆ. ಮತ್ತೆ ಎರಡು ಶಿಬಿರ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿದ್ದು, 250 ಯುನಿಟ್ ಸಂಗ್ರಹ ಗುರಿ ಹೊಂದಲಾಗಿದೆ. 2019ರಲ್ಲಿ ಮಾರ್ಚ್‌ನಿಂದ ಮೇ ವರೆಗೆ 1500 ಯುನಿಟ್ ರಕ್ತ ಸಂಗ್ರಹಿಸಲಾಗಿತ್ತು. ಆದರೆ ಈ ಬಾರಿ ರಕ್ತ ಸಂಗ್ರಹ ಕುಸಿದಿದೆ. ಬ್ಲಡ್ ಬ್ಯಾಂಕ್‌ನಿಂದ ತಾಲೂಕಿನ ವಿವಿಧ ಆಸ್ಪತ್ರೆಗಳಿಗೆ ತಿಂಗಳಿಗೆ 350 ಯುನಿಟ್ ರಕ್ತ ನೀಡಲಾಗುತ್ತದೆ. ಹೀಗಾಗಿ ತುರ್ತು ಸಂದರ್ಭದಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳನ್ನು ಅಶ್ರಯಿಸಲಾಗಿದೆ. ಇದಕ್ಕಾಗಿ ಸಂಸ್ಥೆಯಿಂದಲೇ ರಕ್ತದಾನಿಗಳಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ರೆಡ್‌ಕ್ರಾಸ್ ಕುಂದಾಪುರ ಘಟಕಾಧ್ಯಕ್ಷ ಜಯಕರ ಶೆಟ್ಟಿ.

20 ಯುನಿಟ್ ರಕ್ತ ಸಂಗ್ರಹ: ಅಜ್ಜರಕಾಡು ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಮಂಗಳವಾರ ರಕ್ತದ ಕೊರತೆ ಕಂಡು ಬಂದಿದ್ದು, ತುರ್ತು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 20 ರಕ್ತದಾನಿಗಳಿಂದ ರಕ್ತನಿಧಿ ಕೇಂದ್ರಕ್ಕೆ 20 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ರಕ್ತದಾನಿಗಳು ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡಲು ನಿತ್ಯ ಅವಕಾಶ ಒದಗಿಸಲಾಗಿದೆ. ರಕ್ತದಾನಿಗಳು ಸಾಮಾಜಿಕ ಅಂತರ ಕಾಯ್ದು ಕೊಳ್ಳುವಿಕೆ, ಮುಖಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯ. ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಿದ ಬಳಿಕವೇ ರಕ್ತ ಪಡೆಯಲಾಗುವುದು. - ಡಾ.ವೀಣಾ, ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net