

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಧಾರವಾಡ ಜಿಲ್ಲಾ ಎಸ್ಸಿ ಎಸ್ಟಿ ಪೌರ ಕಾರ್ವಿುಕರ ಮತ್ತು ನೌಕರರ ಸಂಘದ ನೇತೃತ್ವದಲ್ಲಿ ಅನಿರ್ದಿಷ್ಟ ಅವಧಿಯ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಹು-ಧಾ ಮಹಾನಗರ ಪಾಲಿಕೆಯ ನೇರ ಪಾವತಿ ಹಾಗೂ ಗುತ್ತಿಗೆ ಪೌರ ಕಾರ್ವಿುಕರು ಸೋಮವಾರ ರಕ್ತ ಪತ್ರ ಚಳವಳಿ ನಡೆಸಿದರು.
ಪೋಸ್ಟ್ ಕಾರ್ಡ್ನಲ್ಲಿ ರಕ್ತದಲ್ಲಿ ತಮ್ಮ ಬೇಡಿಕೆಗಳನ್ನು ಬರೆದು ಅಂಚೆ ಮೂಲಕ ಮುಖ್ಯಮಂತ್ರಿಗೆ ರವಾನಿಸಿದರು.
ಪಾಲಿಕೆ ಆಯುಕ್ತರು ಧರಣಿ ನಿರತ ಪೌರ ಕಾರ್ವಿುಕರನ್ನು ಕೆಲಸದಿಂದ ತೆಗೆಯುವುದಾಗಿ ಹಾಗೂ ಕಾನೂನು ಬಾಹಿರವಾಗಿ ನೋಟೀಸ್ ನೀಡುವ ಮೂಲಕ ನಮ್ಮ ಹೋರಾಟವನ್ನು ಹತ್ತಿಕ್ಕುವ ಹುನ್ನಾರ ನಡೆಸಿದ್ದಾರೆ. ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರವೇ ಹೊರಡಿಸಿದ ಆದೇಶ ಅನುಷ್ಠಾನಗೊಳಿಸದೇ ಪಾಲಿಕೆ ಆಯುಕ್ತರು ಅನ್ಯಾಯ ಮಾಡುತಿದ್ದಾರೆ ಎಂದು ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಆರೋಪಿಸಿದರು.
ಧರಣಿ ನಿರತ 5 ಜನ ಪೌರಕಾರ್ವಿುಕರು ಅಸ್ವಸ್ಥಗೊಂಡಿದ್ದಾರೆ. ಸರ್ಕಾರ ಕೂಡಲೇ ನೇರ ನೇಮಕಾತಿ, ನೇರ ವೇತನ, ವಿವಿಧ ಹಕ್ಕೋತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.
ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ಸೋಮು ಮೊರಬದ, ಕನಕಪ್ಪ ಕೋಟಬಾಗಿ, ಚಂದ್ರಶೇಖರ ಖಾನಾಪುರ, ಕಿರಣಕುಮಾರ ಸೋಮರಡ್ಡಿ, ಸುರೇಶ ನಾಗರಾಳ, ವಿಜಯಕುಮಾರ ಗಬ್ಬೂರ, ರವಿ ಹೊಸಮನಿ, ಮಂಜುನಾಥ ಯರಮಸಾಳ, ಆನಂದ ಬಾವುರ, ರಾಮು ತಿಳಿಗಾಳ, ಇತರರು ಇದ್ದರು.