

ಮಡಿಕೇರಿ: ಗಾಯಾಳುವಿನ ಜೀವ ಸಂರಕ್ಷಣೆ ಮತ್ತು ರೋಗಿಗೆ ಅನಿವಾರ್ಯತೆಯಾದ ಸಂದರ್ಭದಲ್ಲಿ ನೀಡಲ್ಪಡುವ ರಕ್ತವನ್ನು ದಾನವಾಗಿ ನೀಡುವ ಮಹತ್ವದ ಸೇವೆ ಕೈಗೊಳ್ಳುವ ರಕ್ತದಾನಿಗಳೇ ನಿಜವಾದ ಸೂಪರ್ ಹೀರೋಗಳಾಗಿದ್ದಾರೆ ಎಂದು ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಎಚ್.ಟಿ.ಅನಿಲ್ ಅಭಿಪ್ರಾಯಪಟ್ಟರು.
ನಗರದ ರೋಟರಿ ಸಭಾಂಗಣದಲ್ಲಿ ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ ೭ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜಮುಖಿಯಾದ ಮಾನವನಿಗೆ ಎಲ್ಲಾ ರೀತಿಯಲ್ಲಿಯೂ ತಪ್ತಿ ನೀಡಬಲ್ಲ ಕಾರ್ಯವಾಗಿ ರಕ್ತದಾನದಂಥ ಸೇವೆ ಕಂಡುಬರುತ್ತದೆ. ರಕ್ತದಾನದ ಮೂಲಕ ದಾನಿಯು ಮತ್ತೊಂದು ಜೀವವನ್ನು ಸಂರಕ್ಷಿಸುತ್ತಾನೆ. ಈ ನಿಟ್ಟಿನಲ್ಲಿ ದೇವರು ಕೂಡ ಮೆಚ್ಚುವ ಕೆಲಸ ಮಾಡಿ, ರಕ್ತವನ್ನು ಸಕಾಲಿಕವಾಗಿ ಪಡೆದು ಜೀವ ಉಳಿಸಿಕೊಳ್ಳುವವನ ಪಾಲಿಗೂ ದಾನಿ ದೇವರಂತೆ ಕಾಣುತ್ತಾನೆ. ರಕ್ತದಾನಿಗಳೇ ಈ ಸಮಾಜದಲ್ಲಿ ನಿಜವಾದ ಸೂಪರ್ ಹೀರೋಗಳಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಜಗತ್ತು ಆಧುನಿಕ ತಂತ್ರಜ್ಞಾನಗಳ ನೆರವಿನಿಂದ ಎಷ್ಟೇ ಮುಂದುವರೆದಿದ್ದರೂ ಇಂದಿಗೂ ಕೃತಕ ರೀತಿಯಲ್ಲಿ ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಹೀಗಾಗಿಯೇ ರಕ್ತಕ್ಕೆ ಮಹತ್ವ ಎಂದೆಂದೂ ಇರುತ್ತದೆ. ಸರ್ಕಾರ ರಕ್ತದಾನಕ್ಕೆ ಸಾಕಷ್ಟು ಪ್ರಚಾರ ಕೈಗೊಂಡಿದ್ದರೂ ಅನೇಕರಲ್ಲಿ ರಕ್ತದಾನದ ಕುರಿತು ಆತಂಕ ಇನ್ನೂ ಇದೆ. ಇಂಥ ಭಯವನ್ನು ಹೋಗಲಾಡಿಸುವ ಕೆಲಸಗಳೂ ಸಂಘಸಂಸ್ಥೆಗಳಿಂದ ಆಗಬೇಕೆಂದು ಕರೆ ನೀಡಿದರು.
ಜಿಲ್ಲಾ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ಕರುಂಬಯ್ಯ ಮಾತನಾಡಿ, ಮಡಿಕೇರಿಯಲ್ಲಿ ಜಿಲ್ಲಾಸ್ಪತ್ರೆ ವಿಸ್ತಾರಗೊಂಡು ಇನ್ನಷ್ಟು ಸೌಲಭ್ಯ ಹೊಂದಿದ ಬಳಿಕ ರೋಗಿಗಳ ದಾಖಲಾತಿ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಹೀಗಾಗಿ ರಕ್ತಕ್ಕಾಗಿ ಬೇಡಿಕೆ ಕೂಡ ಏರಿಕೆಯಾಗಿದೆ. ಪ್ರತೀ ತಿಂಗಳು ಜಿಲ್ಲಾ ರಕ್ತನಿಧಿಗೆ ೫೦೦ ಯೂನಿಟ್ ರಕ್ತದ ಅಗತ್ಯವಿದ್ದು, ತಿಂಗಳಿಗೆ ರಕ್ತಸಂಗ್ರಹಣೆಯ ಕನಿಷ್ಟ ೧೦ ಶಿಬಿರಗಳ ಮೂಲಕ ಪ್ರತೀ ಶಿಬಿರದಿಂದಲೂ ೫೦ ಯೂನಿಟ್ ರಕ್ತ ಸಂಗ್ರಹ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ವಾರ್ಷಿಕವಾಗಿ ಕೊಡಗು ಜಿಲ್ಲೆಯಲ್ಲಿ ಕನಿಷ್ಟ ೧೦೦ ರಕ್ತಸಂಗ್ರಹಣಾ ಶಿಬಿರದ ಅನಿವಾರ್ಯತೆಯಿದ್ದು, ಈ ನಿಟ್ಟಿನಲ್ಲಿ ರಕ್ತ ಸಂಗ್ರಹಣೆಗೆ ಜಿಲ್ಲೆಯಾದ್ಯಂತ ಜನರು ಸಹಕಾರ ನೀಡಬೇಕು. ೧೮ ರಿಂದ ೬೫ ವರ್ಷದೊಳಗಿನ ಆರೋಗ್ಯವಂತರೆಲ್ಲರೂ ರಕ್ತದಾನ ಮಾಡಬಹುದಾಗಿದ್ದು, ರಕ್ತದಾನ ಮಾಡುವುದು ಆರೋಗ್ಯವಂತನ ಹೊಣೆಗಾರಿಕೆಯೂ ಆಗಿದೆ ಎಂದರು.
ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ ಅಧ್ಯಕ್ಷ ಪಿ.ಪಿ.ಸುಕುಮಾರ್ ಮಾತನಾಡಿ, ಶಿಬಿರದಲ್ಲಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಮಾಡುತ್ತಿರುುವುದು ಶ್ಲಾಘನೀಯ ಬೆಳವಣಿಗೆಯಾಗಿದೆ. ಮುಂದಿನ ಶಿಬಿರಗಳಿಗೆ ಬರುವ ರಕ್ತದಾನಿಗಳಿಗೆ ಪ್ರಯಾಣ ವೆಚ್ಚವನ್ನೂ ಸಂಸ್ಥೆ ವತಿಯಿಂದ ಭರಿಸಲಾಗುತ್ತದೆ ಎಂದು ಘೋಷಿಸಿದ ಅವರು, ಜಿಲ್ಲೆಯಾದ್ಯಂತ ಇರುವ ಕಾಲೇಜುಗಳಿಗೆ ತೆರಳಿ ರಕ್ತದಾನದ ಮಹತ್ವ ತಿಳಿಸುವುದಲ್ಲದೇ ರಕ್ತದಾನಕ್ಕೆ ಪ್ರೇರೇಪಣೆ ಮಾಡುವ ಉದ್ದೇಶವೂ ಇದೆ ಎಂದು ಹೇಳಿದರು.
ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಖಲೀಲ್ ಕ್ರಿಯೇಟಿವ್, ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮೊಹಮ್ಮದ್ ಅಂಜುಮ್ ಮಾತನಾಡಿ, ಕರ್ನಾಟಕ ಬ್ಲಡ್ ಹೆಲ್ಪ ಲೈನ್ ಅವರ ಸಹಕಾರ ಕೂಡ ತಮ್ಮ ಸಂಸ್ಥೆಗೆ ದೊರಕಿರುವುದು ಹೆಮ್ಮೆ ತಂದಿದೆ ಎಂದರು.
ಮಡಿಕೇರಿ ರೋಟರಿ ಸಂಸ್ಥೆಯ ಅಧ್ಯಕ್ಷ ಸುದಯ್ ನಾಣಯ್ಯ, ಮಡಿಕೇರಿಯ ಎಚ್‌ಡಿಎಫ್‌ಸಿ ಬ್ಯಾಂಕ್ ಆಪರೇಷನ್ ಮ್ಯಾನೇಜರ್ ನಾರಾಯಣ ರಾಜೇಂದ್ರ, ನೇತ್ರ ಆಪ್ಟಿಕಲ್ಸ್ ಮಾಲೀಕರಾದ ಅಫ್ಸಾನ್, ಡಾ.ವಿನಾಯಕ್, ಸಂಸ್ಥೆಯ ಕಾರ್ಯದರ್ಶಿ ಮೈಖೆಲ್ ವರ್ಗೀಸ್ ವೇದಿಕೆಯಲ್ಲಿದ್ದರು. ಚನ್ನನಾಯಕ ನಿರೂಪಿಸಿದ ಕಾರ್ಯಕ್ರಮದಲ್ಲಿ ಬಾಳೆಯಡ ದಿವ್ಯ ಸ್ವಾಗತಿಸಿದರೆ, ಮುಸ್ತಫ ವಂದಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ಬ್ಲಡ್ ಡೋನರ್ಸ್ ಸಂಘದ ಪ್ರಗತಿಗೆ ಕಾರಣಕರ್ತರಾದವರನು ಸನ್ಮಾನಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮೊಹಮ್ಮದ್ ಅಂಜುಮ್, ನಿಕಟಪೂರ್ವ ಅಧ್ಯಕ್ಷ ಖಲೀಲ್ ಕ್ರಿಯೆಟೀವ್ ಸಂಸ್ಥೆಯ ಉಪಾಧ್ಯಕ್ಷ ೮೫ ಸಲ ರಕ್ತದಾನ ಮಾಡಿದ ದಾಖಲೆಗೆ ಕಾರಣರಾದ ಅಶ್ರಫ್, ಸಂಸ್ಥೆಯ ಸದಸ್ಯ ಉನೈಸ್ ಅವರುಗಳನ್ನು ಸನ್ಮಾನಿಸಲಾಯಿತು.
ರಕ್ತದಾನ ಶಿಬಿರದಲ್ಲಿ ನೂರಾರು ಸಾರ್ವಜನಿಕರು ರಕ್ತದಾನ ಮಾಡಿದರೆ ಹೈದರಾಬಾದ್‌ನಲ್ಲಿದ್ದ ಮಡಿಕೇರಿ ಮೂಲದ ಅಣ್ಣತಂಗಿ ಕೂಡ ಶಿಬಿರಕ್ಕಾಗಿ ಮಡಿಕೇರಿಗೆ ಬಂದು ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ಕೊಡಗು ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ಟೇಬಲ್ ರಾಮಪ್ಪ ೫೨ನೇ ಬಾರಿ ರಕ್ದದಾನ ಮಾಡಿ ಗಮನ ಸೆಳೆದರು. ಅನೇಕ ಮಹಿಳೆಯರೂ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದರು. ಇದೇ ಸಂದರ್ಭ ನೇತ್ರ ತಪಾಸಣಾ ಶಿಬಿರ ಕೂಡ ಆಯೋಜಿಸಲಾಗಿತ್ತು. ಅಗತ್ಯವುಳ್ಳವರಿಗೆ ನೇತ್ರ ಆಪ್ಟಿಕಲ್ಸ್ ಮೂಲಕ ಕನ್ನಡಕ ಉಚಿತವಾಗಿ ನೀಡಲಾಯಿತು.