ಆಗಸ್ಟ್ 25 ರಂದು ದುಬೈಯಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ 400 ನೇ ಶಿಬಿರ

b.d
Published on

ಮಂಗಳೂರು: ಕಳೆದ ಹತ್ತು ವರ್ಷಗಳಿಂದ ರಕ್ತದಾನ ಶಿಬಿರ ಹಾಗೂ ಇತರ ಸಾಮಾಜಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ 400ನೆ ರಕ್ತದಾನ ಶಿಬಿರ ಆ. 25ರಂದು ದುಬೈನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪೂರಕವಾಗಿ ಆ. 27ರಂದು ದೇರಳಕಟ್ಟೆ ಪರಿಸರದಲ್ಲಿ 400 ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
 ಕಳೆದ 10 ವರ್ಷಗಳಲ್ಲಿ 399 ರಕ್ತದಾನ ಶಿಬಿರಗಳ ಮೂಲಕ 35,000ಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹಿಸಿ ವಿವಿಧ ಆಸ್ಪತ್ರೆಗಳ ಮೂಲಕ ಅಗತ್ಯವುಳ್ಳವರಿಗೆ ನೀಡಲಾಗಿದೆ ಎಂದು ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಿದ್ದೀಕ್ ಮಂಜೇಶ್ವರ ಅವರು ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದುಬೈನಲ್ಲಿ ಫಾಝ್ ಸೂಪರ್ ಮಾರುಕಟ್ಟೆ ಎದುರು, ಹಯಾತ್ ರೆಸಿಡೆನ್ಸಿ ಎದುರು ದೇರಾ ದುಬೈ ಮತ್ತು ಅಲ್ ಖೈಲ್ ಮಾಲ್ ಅಲ್ ಖ್ಯೂಝ್ ದುಬೈನಲ್ಲಿ ರಕ್ತದಾನ ಶಿಬಿರಗಳು ಲತೀಫಾ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ನವಾಝ್ ನರಿಂಗಾನ, ಶಾಹುಲ್ ಹಮೀದ್ ಕಾಶಿಪಟ್ನ, ಫರ್ಜಾನ್ ಸಿದ್ಧಕಟ್ಟೆ, ಲತೀಫ್ ಉಪ್ಪಿನಂಗಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net