ಸಪ್ತಾಹದಲ್ಲಿ 700 ಯೂನಿಟ್ ರಕ್ತಸಂಗ್ರಹ: ಜಿಲ್ಲಾಡಳಿತದ ಪ್ರಯತ್ನಕ್ಕೆ ಉತ್ತಮ ಬೆಂಬಲ

1 (3)
Published on

ಮಂಡ್ಯ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಕ್ತಕ್ಕೆ ಕೊರತೆ ಎದುರಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಸಪ್ತಾಹಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅಂತೆಯೇ 700ಕ್ಕೂ ಹೆಚ್ಚು ಯೂನಿಟ್ ರಕ್ತಸಂಗ್ರಹವಾಗಿದೆ.

ರೋಗಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹಾಗೂ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ನೇತೃತ್ವದಲ್ಲಿ ಹಲವು ಸಂಘಟನೆಗಳೊಂದಿಗೆ ಸೇರಿ ಜಿಲ್ಲೆಯಲ್ಲಿ ಏಳು ದಿನ ಸಪ್ತಾಹ ಮಾಡಲಾಯಿತು. ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದಂತಾಗಿದೆ.

ಈ ಹಿನ್ನೆಲೆಯಲ್ಲಿ ಮಾಂಡವ್ಯ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಮಾಂಡವ್ಯ ಸಂಸ್ಥೆಯ ಸಹಯೋಗದಲ್ಲಿ ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಆಯೋಜಿಸಲಾಗಿತ್ತು. ಈ ವೇಳೆ ಹಲವು ರಕ್ತದಾನಿಗಳು ಹಾಗೂ ಸಂಸ್ಥೆಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ಅತಿ ಹೆಚ್ಚು ರಕ್ತದಾನ ಶಿಬಿರವನ್ನು ಆಯೋಜಿಸಿದ ಹಿನ್ನೆಲೆಯಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಜೀವಧಾರೆ ಟ್ರಸ್ಟ್ ಮತ್ತು ಪಿಇಟಿ ಶಿಕ್ಷಣ ಸಂಸ್ಥೆಗೆ ವಿಶೇಷ ಪುರಸ್ಕಾರ ನೀಡಲಾಯಿತು. ಅಂತೆಯೇ ವೈಯಕ್ತಿಕವಾಗಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಪ್ರಕಾಶ್ ಮಳವಳ್ಳಿ, ಸತ್ಯಪ್ರಕಾಶ್ ನಾಗಮಂಗಲ, ಬಿ.ಪಿ.ರಾಜು ಹಳೇಬೂದನೂರು ಜಿಲ್ಲಾಮಟ್ಟದ ಹಾಗೂ ಪ್ರಭುಸ್ವಾಮಿ, ರಾಮಚಂದ್ರ ಪಾಂಡವಪುರ, ಸುಥಾಲ್ ಮಂಡ್ಯ, ಆದರ್ಶ ಮದ್ದೂರು, ಚಂದನ್ ಮಂಡ್ಯ, ಅಭಿಲಾಷ್ ಶ್ರೀರಂಗಪಟ್ಟಣ, ರುಕ್ಮಾಂಗದ ಮತ್ತು ಮಮತಾ ಕೆ.ಆರ್.ಪೇಟೆ ಅವರಿಗೆ ತಾಲೂಕು ಮಟ್ಟದ ಪುರಸ್ಕಾರ ನೀಡಿ ಗೌರವಿಸಲಾಯಿತು. ಇನ್ನು ರಕ್ತದಾನ ಕುರಿತು ಮಂಡ್ಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಹಾಗೂ ಶಂಕರನಗರದ ಮಹಿಳಾ ಹಾಸ್ಟೆಲ್‌ನಲ್ಲಿ ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net