

ಕಾರಟಗಿ: ರಕ್ತದಾನ ಮಾಡುವ ಮೂಲಕ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಮತ್ತೊಬ್ಬರ ಜೀವ ಉಳಿಸಲು ಎಲ್ಲರೂ ಮುಂದಾಗಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಕುಂತಲಾ ಪಾಟೀಲ್ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ವಿಶ್ವ ರಕ್ತದಾನ ದಿನಾಚರಣೆ ನಿಮಿತ್ತ ಬುಧವಾರ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ಮನುಷ್ಯನ ಉಳಿವು ಮತ್ತು ಬೆಳವಣಿಗೆಗೆ ರಕ್ತದ ಅಗತ್ಯವಿದೆ. ಅಪಘಾತ ಸಂಭವಿಸಿ ಜೀವಕ್ಕೆ ತುರ್ತು ಪರಿಸ್ಥಿತಿ ಎದುರಾದ ಸಂದರ್ಭಗಳಲ್ಲಿ ರಕ್ತದಾನ ಮಾಡಿ ಮಾನವೀಯತೆ ತೋರಬೇಕು. ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸುವ ಶಕ್ತಿ ನಮ್ಮಲ್ಲಿದೆ ಎಂಬುದನ್ನುಮರೆಯಬಾರದು. ಒತ್ತಡದ ಜೀವನದ ನಡುವೆಯೂ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದರು.
83 ಜನ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದೇವೇಂದ್ರಪ್ಪ, ಸಿಬ್ಬಂದಿಗಳಾದ ಹನುಮಂತಪ್ಪ, ನವೀನ್‌ಕುಮಾರ್, ಶರಣಪ್ಪ, ಶ್ರುತಿ, ಪುಷ್ಪಲತಾ ಇತರರಿದ್ದರು.