

ಸಾಗರ: ಮಹಿಳೆಯರು, ಯುವಜನರು ರಕ್ತದಾನದ ಬಗ್ಗೆ ಹೆಚ್ಚೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು. ರಕ್ತದಾನ ಆರೋಗ್ಯಕ್ಕೆ ಉಪಕಾರಿಯೇ ಹೊರತು ಅಪಾಯಕಾರಿಯಲ್ಲ ಎಂದು ರೋಟರಿ ಸಂಸ್ಥೆ ಅಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬುಧವಾರ ವೀರಶೈವ ಯುವಕ ಸಂಘ, ವೀರಶೈವ ಸಮಾಜ, ಅಕ್ಕನ ಬಳಗ ಮತ್ತು ರೋಟರಿ ರಕ್ತನಿಧ ಕೇಂದ್ರದಿಂದ 50ನೇ ವರ್ಷದ ಗಣೇಶೋತ್ಸವ ಅಂಗವಾಗಿ ದಿ. ಸತೀಶ್ ಕೋರಿ, ಪ್ರಕಾಶ್ ದುಗ್ಗಾವಿ, ಚಂದ್ರು ವರದಿ ಇವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ, ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಿ ಅವರು ಮಾತನಾಡಿದರು.
ಶುಭ ಸಮಾರಂಭಗಳು, ಉತ್ಸವಗಳಲ್ಲಿ ರಕ್ತದಾನ ಶಿಬಿರ ಆಯೋಜಿಸುವುದು ಉತ್ತಮ ಬೆಳವಣಿಗೆ. ಧಾರ್ಮಿಕ ಕಾರ್ಯದ ಜತೆಗೆ ಸಾಮಾಜಿಕ ಕೆಲಸವನ್ನೂ ಮಾಡಿದ ಫಲ ಸಂಸ್ಥೆಗಳಿಗೆ ಸಿಗುತ್ತದೆ. ಪ್ರಸ್ತುತ ದಿನಮಾನಗಳಲ್ಲಿ ರಕ್ತ ತೀರ ಅಗತ್ಯವಿದ್ದು, ಶಿಬಿರಗಳ ಮೂಲಕ ರಕ್ತ ಪೂರೈಕೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ವೀರಶೈವ ಸಮಾಜದ ಅಧ್ಯಕ್ಷ ಬಸವರಾಜ ಗುಂಡಾಲಿ ಮಾತನಾಡಿ, ರಕ್ತದಾನ ಅತ್ಯಂತ ಪುಣ್ಯದ ಕೆಲಸ. ನಮ್ಮ ಸಮಾಜದ ವತಿಯಿಂದ ನಿರಂತರವಾಗಿ ಗಣೇಶೋತ್ಸವ ಸೇರಿದಂತೆ ವಿವಿಧ ಸಂದರ್ಭದಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಯುವಜನರು ರಕ್ತದಾನ ಮಾಡಲು ಸ್ವಯಂಪ್ರೇರಿತವಾಗಿ ಮುಂದೆ ಬರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವೀರಶೈವ ಯುವಕ ಸಂಘದ ಅಧ್ಯಕ್ಷ ಗುರುಪ್ರಸಾದ್, ನಮ್ಮ ಯುವಕ ಸಂಘವನ್ನು ಕಟ್ಟುವಲ್ಲಿ ನಿರಂತರವಾಗಿ ಶ್ರಮಿಸಿ ಈಗ ನಮ್ಮ ಜತೆ ಇಲ್ಲದ ಸತೀಶ್ ಕೋರಿ, ಪ್ರಕಾಶ್, ಚಂದ್ರು ಅವರ ಹೆಸರಿನಲ್ಲಿ ನಾವು ರಕ್ತದಾನ ಶಿಬಿರವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಐದು ವರ್ಷಗಳಿಂದ ನಡೆಸುತ್ತಿರುವ ರಕ್ತದಾನ ಶಿಬಿರಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದರು.
ರೋಟರಿ ರಕ್ತನಿಧಿ ಕೇಂದ್ರದ ಡಾ. ಎಚ್.ಎಂ.ಶಿವಕುಮಾರ್, ಪ್ರಮುಖರಾದ ಡಾ. ಬಿ.ಜಿ.ಸಂಗಮ್, ಡಾ. ಸುಬೋದ್, ನಿರಂಜನ ಕೋರಿ, ಗಿರೀಶ್ ಬೇಸೂರು, ಯೋಗೀಶ್ ಪಟೇಲ್, ಎಂ.ಎಸ್.ಶಶಿಧರ್, ಶಂಭು ದಳವಾಯಿ ಇತರರಿದ್ದರು.