

ವಿಜಯವಾಣಿ ಸುದ್ದಿಜಾಲ ಧಾರವಾಡ
ರಕ್ತದಾನ ಶಿಬಿರಗಳ ಆಯೋಜನೆ ರಕ್ತದ ಕೊರತೆ ಇರುವ ವ್ಯಕ್ತಿಯನ್ನು ಬದುಕಿಸುವುದಷ್ಟೆ ಅಲ್ಲದೆ ಸಮಾಜಮುಖಿ ಕಾರ್ಯಕ್ಕೂ ಪ್ರೇರಣೆ ನೀಡುತ್ತದೆ. ರಕ ್ತದಾನದಿಂದ ಸಮಾಜದಲ್ಲಿನ ಅನಾರೋಗ್ಯ ಪೀಡಿತರಿಗೆ ಪರೋಕ್ಷವಾಗಿ ಸಹಾಯ ಮಾಡಿದಂತಾಗುತ್ತದೆ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜೆಎಸ್‌ಎಸ್‌ನ ಶ್ರೀ ಮಂಜುನಾಥೇಶ್ವರ ಸ್ನಾತಕ ಹಾಗೂ ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ರಾಷ್ಟ್ರೋತ್ಥಾನ ರಕ್ತ ಭಂಡಾರ ಮತ್ತು ಎಸ್‌ಡಿಎಂ ರಕ್ತಭಂಡಾರದ ಸಹಭಾಗಿತ್ವದಲ್ಲಿ ಗುರುವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನಕ್ಕೆ ಮುಂದಾಗಬೇಕು. ರಕ್ತದಿಂದ ವಿವಿಧ ಅಂಶಗಳನ್ನು ಬೇರ್ಪಡಿಸಿ ಅವಶ್ಯವಿರುವ ವ್ಯಕ್ತಿಯ ದೇಹಕ್ಕೆ ಅದನ್ನು ಸೇರ್ಪಡೆ ಮಾಡಲಾಗುತ್ತದೆ. ರಕ್ತದಾನ ನೈತಿಕ ಉದ್ದೇಶಗಳಿಗೆ ನಡೆಯುವ ಉದಾತ್ತ ಕಾರ್ಯವಾಗಿದ್ದು, ಉತ್ತಮ ಆರೋಗ್ಯ ಹೊಂದಿದವರು ರಕ್ತದಾನ ಮಾಡಿ. ಯುವಜನತೆ ದೇಶದ ಶಕ್ತಿ ನೀವು ಮಾಡಲ್ಪಡುವ ರಕ್ತದಾನ ಪ್ರಜೆಗಳ ಬಾಳಿಗೆ, ದೇಶದ ಭವಿಷ್ಯಕ್ಕೆ ಯಶಸ್ಸು ನೀಡಲಿ ಎಂದರು.
ದತ್ತಾತ್ರೇಯ ಕುಲಕರ್ಣಿ ಮಾತನಾಡಿ, ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸುವುದರ ಜತೆಗೆ ನಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಬಹುದು. ರಕ್ತದಾನ ಶಿಬಿರ ಮಾತ್ರದಲ್ಲದೆ ರಾಷ್ಟ್ರೋತ್ಥಾನ ಪರಿಷತ್‌ನ ಅನೇಕ ಸಮಾಜಮುಖಿ ಕಾರ್ಯಕ್ರಮಗಳಿಗೆ, ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ನಡೆಸುತ್ತಿರುವ ತರಬೇತಿಗಳಿಗೆ ಜೆಎಸ್‌ಎಸ್ ಸಹಕಾರ, ಪ್ರೋತ್ಸಾಹ ನೀಡುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿದಾಗ ಮಾತ್ರ ದೇಶದ ಪ್ರಗತಿಗೆ ಬೇಕಾದ ಅವಶ್ಯಕತೆಗಳ ಅರಿವು ಮೂಡಲಿದೆ ಎಂದರು.
150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಡಾ. ಸೂರಜ್ ಜೈನ್, ಮಹಾವೀರ ಉಪಾಧ್ಯೆ, ಡಾ. ವಿದ್ಯಾ ರೋಂಗೆ, ಅವಂತಿಕಾ ರೊಟ್ಟಿ, ಮಂಜುನಾಥ ಜೆ.ಪಿ, ಇತರರು ಇದ್ದರು. ರೋನಿಲ್ ಮನೋಹರ ಸ್ವಾಗತಿಸಿದರು. ಮಹಾಂತ ದೇಸಾಯಿ ನಿರೂಪಿಸಿದರು. ಡಾ. ಶಿಲ್ಪಾ ದಾನಪ್ಪಗೌಡರ ವಂದಿಸಿದರು.