

ಹನೂರು: ತುರ್ತು ಸಂದರ್ಭದಲ್ಲಿ ಮತ್ತೊಂದು ಜೀವ ಉಳಿಸಲು ರಕ್ತದಾನ ಸಹಕಾರಿ. ಆದ್ದರಿಂದ ರಕ್ತದಾನಕ್ಕೆ ಮುಂದಾಗಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಭಾನುವಾರ ಗಣರಾಜ್ಯೋತ್ಸವ ಅಂಗವಾಗಿ ಕಾಮಗೆರೆ ಹೋಲಿಕ್ರಾಸ್ ಸಂಸ್ಥೆ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತದಾನ ಜೀವಗಳನ್ನು ಉಳಿಸಲು ಸಹಕಾರಿಯಾಗಿದೆ. ವೈದ್ಯಕೀಯ ಚಿಕಿತ್ಸೆಯನ್ನು ಬೆಂಬಲಿಸುತ್ತದೆ. ಒತ್ತಡ ಹಾಗೂ ಹೃದಯಾಘಾತವನ್ನು ಕಡಿಮೆಗೊಳಿಸುತ್ತದೆ. ರಕ್ತ ಕಣಗಳನ್ನು ಉತ್ಪಾದಿಸುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಬ್ಬಿಣದ ಮಟ್ಟವನ್ನು ಸಮತೋಲನಗೊಳಿಸುವುದರ ಮೂಲಕ ಆರೋಗ್ಯವನ್ನು ಸುಧಾರಿಸುತ್ತದೆ. ಆದರೆ, ಕೆಲವರು ರಕ್ತದಾನದಿಂದ ದೇಹ ದುರ್ಬಲಗೊಳ್ಳುತ್ತದೆ ಎಂಬ ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ. ಆದ್ದರಿಂದ ಈ ಭಾವನೆಯನ್ನು ತೊಡೆದುಹಾಕಿ ರಕ್ತದಾನ ಮಾಡಲು ಮುಂದಾಗಬೇಕು. ಇತರರನ್ನು ಪ್ರೇರೇಪಿಸಬೇಕು. ಈ ದೆಸೆಯಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದ ಅಂಗವಾಗಿ ಶಿಬಿರವನ್ನು ಆಯೋಜಿಸಲಾಗಿದ್ದು, ಹೆಚ್ಚು ಜನರು ಭಾಗಿಯಾಗಬೇಕು ಎಂದರು.
ಪ.ಪಂ. ಮುಖ್ಯಾಧಿಕಾರಿ ಅಶೋಕ್, ಕೆಲ ಪತ್ರಕರ್ತರು ಹಾಗೂ ಸಾರ್ವಜನಿಕರು ರಕ್ತದಾನ ಮಾಡಿದರು. ಇದಕ್ಕೂ ಮುನ್ನಾ ಗಣರಾಜ್ಯೋವ ಆಚರಿಸಲಾಯಿತು.
ಪಪಂ ಅಧ್ಯಕ್ಷೆ ಮಮ್ತಾಜ್‌ಬಾನು, ಉಪಾಧ್ಯಕ್ಷ ಆನಂದ್‌ಕುಮಾರ್, ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್, ಹೋಲಿಕ್ರಾಸ್ ಸಂಸ್ಥೆಯ ಆಡಳಿತಾಧಿಕಾರಿ ಸ್ಟೇರಿಯಾ, ಸಂಯೋಜಕಿ ಪುಷ್ಪಮೂರ್ತಿ, ಶ್ರುಶೂಷಕಿ ಡಯಾನಾ, ಪ್ರಿಯಮಣಿ, ವಿಶ್ವಪ್ರಿಯ, ನೇಸರ, ಭಾಗ್ಯ ಇತರರು ಇದ್ದರು.