ರಕ್ತದಾನ ಮಾಡುವುದರಿಂದ ಕೊರತೆ ನಿವಾರಣೆ

Rakthadana maduttiruvudu
ರಕ್ತದಾನ ಮಾಡುತ್ತಿರುವ ದಾನಿಗಳು.
Published on

ಶನಿವಾರಸಂತೆ: ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದರಿಂದ ಶರೀರದಲ್ಲಿ ಉತ್ತಮ ರಕ್ತ ಉತ್ಪತ್ತಿಯಾಗುವುದರ ಜತೆಯಲ್ಲಿ ರಕ್ತನಿಧಿ ಕೇಂದ್ರದಲ್ಲಿ ರಕ್ತದ ಕೊರತೆ ನಿವಾರಣೆಯಾಗುತ್ತದೆ ಎಂದು ಮಡಿಕೇರಿ ಜಿಲ್ಲಾ ಕೇಂದ್ರ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕೆ.ಕರುಂಬಯ್ಯ ಅಭಿಪ್ರಾಯಪಟ್ಟರು.

ಆಲೂರು ಸಿದ್ದಾಪುರ ಮಲ್ಲೇಶ್ವರ ರೋಟರಿ ಕ್ಲಬ್ ಹಾಗೂ ಮಡಿಕೇರಿ ಜಿಲ್ಲಾ ರಕ್ತನಿಧಿ ಕೇಂದ್ರ, ಆಲೂರು ಸಿದ್ದಾಪುರ ಪ್ರಾಥಮಿಕ ಅರೋಗ್ಯ ಕೇಂದ್ರದ ಸಹಯೋಗದಲ್ಲಿ ಆಲೂರು ಸಿದ್ದಾಪುರ ರೋಟರಿ ಕ್ಲಬ್ ಸಭಾಂಗಣದಲ್ಲಿ ಮಂಗಳವಾರ ವೀರಯೋಧ ದಿ.ಪಿ.ಪಿ.ದಿವಿನ್ ಸ್ಮರಣಾರ್ಥ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ರಕ್ತದಾನ ಶಿಬಿರಗಳಲ್ಲಿ ರಕ್ತದಾನ ಮಾಡಲು ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಆರೋಗ್ಯವಂತ ವ್ಯಕ್ತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಉತ್ತಮ ರಕ್ತ ಉತ್ಪತ್ತಿಯಾಗುವುದರ ಜತೆಯಲ್ಲಿ ಆರೋಗ್ಯವು ಉತ್ತಮಗೊಳ್ಳುತ್ತದೆ ಎಂದರು.

ರಕ್ತದಾನ ಮಾಡುವುದರಿಂದ ಶರೀರದಲ್ಲಿ ಹೊಸ ರಕ್ತಕಣಗಳು ಉತ್ಪತ್ತಿಯಾಗಿ ಆರೋಗ್ಯವಂತರಾಗಲು ಸಾಧ್ಯವಾಗುತ್ತದೆ. ಇದರ ಜತೆಯಲ್ಲಿ ರಕ್ತದೊತ್ತಡ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ ದೂರವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ರಕ್ತದಾನ ಮಾಡುವಂತ ಶ್ರೇಷ್ಠ ಕಾರ್ಯ ಮಾಡಲು ಮುಂದೆ ಬರಬೇಕು. ಇತ್ತೀಚೆಗೆ ರಕ್ತದ ಕೊರತೆ ಹೆಚ್ಚಾಗುತ್ತಿದ್ದು ಹೊಸದಾಗಿ ರಕ್ತದಾನ ಮಾಡುವವರು ಮುಂದೆ ಬರಬೇಕು. ರಕ್ತಕ್ಕೆ ಬೇರೆ ಪರ್ಯಾಯ ಮಾರ್ಗವಿಲ್ಲ. ಹಾಗಾಗಿ ರಕ್ತದಾನ ಮಾಡಲು ಎಲ್ಲರೂ ಮುಂದಾಗಬೇಕು. ರಕ್ತದ ಅವಶ್ಯಕತೆ ಎಷ್ಟು ಎಂದು ಗೊತ್ತಾಗುವುದು ನಮ್ಮ ಸಂಬಧಿಕರಿಗೆ ರಕ್ತದ ಕೊರತೆ ಎದುರದಾಗ. ಈ ಆಲೋಚನೆ ಇಟ್ಟುಕೊಂಡು ಅನೇಕರು ರಕ್ತನಿಧಿ ಕೇಂದ್ರಕ್ಕೆ ಬಂದು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತ ನೀಡುತ್ತಿದ್ದಾರೆ. ಇದು ಸಾಕಾಗುತ್ತಿಲ್ಲ. ನಮ್ಮ ಜಿಲ್ಲೆ ಚಿಕ್ಕದಾಗಿದ್ದು ರಕ್ತ ನೀಡುವವವರ ಸಂಖ್ಯೆ ಕಡಿಮೆ ಇದೆ. ಈ ದಿಸೆಯಲ್ಲಿ ಇಲ್ಲಿನ ರೋಟರಿ ಕ್ಲಬ್ ರಕ್ತದಾನ ಶಿಬಿರ ಆಯೋಜನೆ ಮಾಡಿರುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಆಲೂರು ಸಿದ್ದಾಪುರ ಪ್ರಾಥಮಿಕ ಅರೋಗ್ಯ ಕೇಂದ್ರದ ಅರೋಗ್ಯ ನೀರಿಕ್ಷಕ ಪ್ರವೀಣ್ ಮಾತನಾಡಿ, ಅನೇಕರಲ್ಲಿ ಇನ್ನು ಸಹ ರಕ್ತದಾನದ ಅರಿವಿನ ಕೊರತೆ ಇದೆ. ಯುವ ಜನತೆ ರಕ್ತದಾನ ಮಾಡಲು ಮುಂದಾಗಬೇಕು. ರಕ್ತದಾನ ಮಾಡುವಾಗ ನಾವು ಅವರ ಅರೋಗ್ಯವನ್ನು ಪರೀಕ್ಷಿಸಿ ರಕ್ತ ಪಡೆಯುತ್ತೇವೆ. ಇದೀಗ ಕ್ಷಯ ರೋಗ ಮುಕ್ತ ಅಭಿಯಾನ ನಡೆಯುತ್ತಿದೆ. ಇದರ ಅರಿವು ಎಲ್ಲರಿಗೂ ಇರಬೇಕು. ಕ್ಷಯ ರೋಗ ಲಕ್ಷಣಗಳಿದ್ದರೆ ಉಚಿತವಾಗಿ ಆರೋಗ್ಯ ಇಲಾಖೆಯಿಂದ ತಪಾಸಣೆ ಮಾಡುತ್ತೇವೆ. ಕ್ಷಯ ರೋಗಮುಕ್ತ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿಯ ಎಲ್ಲ ಗ್ರಾಮವನ್ನು ಮಾಡುವ ಗುರಿ ಹೊಂದಲಾಗಿದೆ ಎಂದರು.

ಆಲೂರು ಸಿದ್ದಾಪುರ ರೋಟರಿ ಕ್ಲಬ್ ವಲಯ ಸೇನಾನಿ ಉದಯ್‌ಕುಮಾರ್ ಮಾತನಾಡಿ, ರೋಟರಿ ಕ್ಲಬ್ ಅನೇಕ ಸಮಾಜಮುಖಿ ಕೆಲಸ ಮಾಡಿಕೊಂಡು ಬರುತ್ತಿದ್ದು, ಸಮಾಜಕ್ಕೆ ಉಪಯೋಗ ಆಗುವಂತ ಕೆಲಸದಲ್ಲಿ ನಿರತವಾಗಿರುವ ಸಂಸ್ಥೆ ರೋಟರಿ ಕ್ಲಬ್ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಲ್ಲೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ದಯಾನಂದ್ ಮಾತನಾಡಿ, ರೋಟರಿ ಕ್ಲಬ್ ಸೇರುವುದರಿಂದ ಅನೇಕ ಉಪಯೋಗವಿದೆ. ಈ ಹಿಂದೆ ನಮ್ಮ ತಂದೆಯವರಿಗೆ ರಕ್ತದ ಅವಶ್ಯಕತೆ ಇದ್ದಾಗ ಮಂಗಳೂರಿನ ರೋಟರಿ ಕ್ಲಬ್ ಸಂಪರ್ಕಿಸಿದಾಗ ತಕ್ಷಣ ರಕ್ತದ ವ್ಯವಸ್ಥೆ ಮಾಡಿಕೊಟ್ಟರು. ಇದೆ ರೀತಿಯ ಅನೇಕ ಸಹಕಾರ ನಾವು ಪಡೆಯಬಹುದಾಗಿದೆ. ರೋಟರಿ ಸದಸ್ಯರು ಯಾರಿಗಾದರೂ ಅರೋಗ್ಯ ಸಮಸ್ಯೆ ಎದುರಾದಾಗ ತಕ್ಷಣ ರೋಟರಿ ಸಂಸ್ಥೆ ಸ್ಪಂದನೆ ನೀಡುತ್ತದೆ ಎಂದರು.

ಮಲ್ಲೇಶ್ವರ ರೋಟರಿ ಕ್ಲಬ್ ಕಾರ್ಯದರ್ಶಿ ಕಿರಣ್, ರೋಟರಿ ಸದಸ್ಯರಾದ ವಿಜಯ್, ಸಂಪತ್, ಕುಶ, ಯತೀಶ್, ಆಲೂರು ಸಿದ್ದಾಪುರ ಪ್ರಾಥಮಿಕ ಅರೋಗ್ಯ ಕೇಂದ್ರದ ಲ್ಯಾಬ್ ಟೆಕ್ನಿಷಿಯನ್ ರುದ್ರೇಶ್, ಆರೋಗ್ಯ ಇಲಾಖೆ ಇಂದಿರಾ, ಅನುಷಾ, ಆಶಾಕಾರ್ಯಕರ್ತೆಯರು ಹಾಗೂ ಮಡಿಕೇರಿ ರಕ್ತನೀಧಿ ಕೇಂದ್ರದ ಸಿಬ್ಬಂದಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net