

ಚನ್ನಗಿರಿ: ದಾನದಲ್ಲಿ ಶ್ರೇಷ್ಠ ದಾನ ರಕ್ತದಾನ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ದಾನಿಗಳು ಮುಂದೆ ಬಂದು ರಕ್ತದಾನ ಮಾಡುವುದರಿಂದ ಒಬ್ಬರ ಜೀವ ಉಳಿಸಿದ ಪುಣ್ಯ ಸಿಗಲಿದೆ ಎಂದು ಲಯನ್ಸ್ ಕ್ಲಬ್ ಚನ್ನಗಿರಿ ಚನ್ನಮ್ಮಾಜಿ ಅಧ್ಯಕ್ಷ ಮಾವಿನಹೊಳೆ ಪ್ರಕಾಶ್ ತಿಳಿಸಿದರು.
ಇಲ್ಲಿನ ರಾಮ ಮನೋಹರ ಲೋಹಿಯಾ ಭವನದಲ್ಲಿ ಲಯನ್ಸ್ ರಕ್ತನಿಧಿ ಕೇಂದ್ರ, ಎಚ್‌ಡಿಎಫ್‌ಸಿ ಬ್ಯಾಂಕ್, ಲಯನ್ಸ್ ಕ್ಲಬ್ ಚನ್ನಗಿರಿ ಚನ್ನಮ್ಮಾಜಿ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಶನಿವಾರ ಮಾತನಾಡಿದರು.
ಅಪಘಾತ ಹಾಗೂ ಜೀವ ಹೋಗುವಂತಹ ಸಮಯದಲ್ಲಿ ತುರ್ತಾಗಿ ರಕ್ತ ಸಿಗದ ಕಾರಣ ಜನರು ಸಾವಿಗೆ ಶರಣಾಗುತ್ತಿದ್ದಾರೆ. ಜನರು ದಾನ ಮಾಡುವಂತಹ ರಕ್ತವನ್ನು ಬೇರೆಯವರಿಗೆ ನೀಡುವ ಮೂಲಕ ಜೀವ ಉಳಿಸಬೇಕಾಗುತ್ತದೆ. ಆರೋಗ್ಯವಂತರಾಗಿ ಇರುವಂತಹ ಹದಿನೆಂಟು ವರ್ಷ ಮೇಲ್ಪಟ್ಟವರು ಯಾರು ಬೇಕಾದರೂ ರಕ್ತವನ್ನು ನೀಡಬಹುದಾಗಿದೆ. ದಾನ ಮಾಡುವ ಮೂಲಕ ಬರುವಂತಹ ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಅನೇಕ ರೋಗಗಳನ್ನು ತಡೆಯಬಹುದು ಮತ್ತು ಹೊಸರಕ್ತ ದೇಹದಲ್ಲಿ ಬೆಳೆಯುವುದರಿಂದ ಆರೋಗ್ಯದ ಸಮಸ್ಯೆ ಇರುವುದಿಲ್ಲ ಎಂದರು.
ಹಣ ಮತ್ತು ಸಂಪತ್ತನ್ನು ಸಂಗ್ರಹಿಸುವ ಯೋಚನೆಯಲ್ಲಿ ನಮ್ಮ ಆರೋಗ್ಯ ಹಾಳುಮಾಡಿಕೊಂಡು ದಿನನಿತ್ಯ ಅನೇಕ ರೋಗಗಳಿಗೆ ಆಹ್ವಾನ ನೀಡುತ್ತಿದ್ದೇವೆ ಎಂದು ವಿಷಾದಿಸಿದರು.
ಒತ್ತಡದ ಬದುಕು ನಡೆಸುವ ಮೂಲಕ ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದೇವೆ ಶ್ರೀಮಂತಿಕೆ ಆರೋಗ್ಯವನ್ನು ನೀಡುವುದಿಲ್ಲ ಅದರ ಬದಲು ನೆಮ್ಮದಿಯ ಬದುಕನ್ನು ಪಡೆಯಲು ಪ್ರತಿನಿತ್ಯ ವ್ಯಾಯಾಮ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ 52 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಲಯನ್ಸ್ ಕ್ಲಬ್‌ನ ಜಿ.ಎಂ.ನರೇಂದ್ರ, ರವಿಕುಮಾರ್, ಸಿ.ಎನ್.ಮುಖೇಶ್, ಅಶೋಕ್, ದೀಪಕ್‌ಕುಮಾರ್, ಜ್ಯೋತಿ ಪ್ರಸಾದ್ ಇದ್ದರು.