

ಕನಕಗಿರಿ: ಅಪಘಾತ ಹಾಗೂ ತುರ್ತು ಸಂದರ್ಭಗಳಲ್ಲಿ ರೋಗಿಗಳ ಜೀವ ಉಳಿಸಲು ರಕ್ತ ದ ಅವಶ್ಯಕತೆ ಇರುತ್ತದೆ. ಹಾಗಾಗಿ ಎಲ್ಲರೂ ರಕ್ತದಾನಕ್ಕೆ ಮುಂದಾಗಲಿ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಸಹನಾ ಎಂ.ಜಿ ಹೇಳಿದರು.
ಕೌಡೇ ಪೀರ ಮೊಹರಂ ಹಬ್ಬದ ನಿಮಿತ್ತ ಪಟ್ಟಣದ 9 ಹಾಗೂ 10ನೇ ವಾರ್ಡ್‌ನ ಕೌಡೇಪೀರ ಯುವಕರ ಕಮಿಟಿ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಯುವಕರು ಮೂಢನಂಬಿಕೆಗೆ ಬಲಿಯಾಗಬಾರದು. ರಕ್ತ ನೀಡಿ ಮತ್ತೊಬ್ಬರ ಜೀವ ಉಳಿಸಲು ಮುಂದಾಗಬೇಕು ಎಂದರು. ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಸಿದ್ದರಾಮಪ್ಪ ಮಾತನಾಡಿದರು.
ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ್, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯ ಸಂಗಪ್ಪ ಸಜ್ಜನ, ಪ್ರಾಕೃಪಸ ಸಂಘದ ನಿರ್ದೇಶಕ ಸಿಂಧೂ ಬಲ್ಲಾಳ, ಪ್ರಮುಖರಾದ ಹುಸೇನಸಾಬ ಗೋರಳ್ಳಿ, ತಾಜುದ್ದೀನ್ ಸಾಬ ಗೋರಳ್ಳಿ, ಹಸೇನಸಾಬ ಗೋರಳ್ಳಿ, ಶಿವುಕುಮಾರ್ ಇತರರಿದ್ದರು.