

ಮಂಡ್ಯ: ರಕ್ತದ ಕೊರತೆ, ಸಮಯಕ್ಕೆ ಸರಿಯಾಗಿ ರಕ್ತ ಸಿಗದ ಕಾರಣ ಭಾರತದಲ್ಲಿ ಪ್ರತಿ ವರ್ಷ ಶೇ.20ರಷ್ಟು ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಶಾಸಕ ರವಿಕುಮಾರ್ ಗಣಿಗ ಆತಂಕ ವ್ಯಕ್ತಪಡಿಸಿದರು.
ನಗರದ ಹೊರವಲಯದ ಸ್ಯಾಂಜೋ ಆಸ್ಪತ್ರೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ಯಾಂಜೋ ಸ್ಕೂಲ್ ಮತ್ತು ಕಾಲೇಜ್ ಆ್ ನರ್ಸಿಂಗ್, ಜೀವಧಾರೆ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲೆಡೆಯೂ ರಕ್ತದ ಕೊರತೆ ಇದೆ. ಅದನ್ನು ದಾನಿಗಳ ಮೂಲಕವೇ ಪಡೆದು ಸರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜೀವಧಾರೆ ಟ್ರಸ್ಟ್‌ನವರು ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವಶ್ಯವಿರುವವರಿಗೆ ರಕ್ತದ ಪೂರೈಕೆ ಅಗತ್ಯವಾಗಿ ಆಗಬೇಕು. ದಾನಿಗಳು ಪ್ರತಿಯೊಂದು ಜೀವವನ್ನು ಉಳಿಸುವ ನಿಟ್ಟಿನಲ್ಲಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂತೆಯೇ ಸ್ಯಾಂಜೋ ಆಸ್ಪತ್ರೆ ಸಹ ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಆರೋಗ್ಯ ಸೇವೆ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೀವಧಾರೆ ಟ್ರಸ್ಟ್ ಅಧ್ಯಕ್ಷ ಎಸ್.ಎಂ.ನಟರಾಜು ಮಾತನಾಡಿ, ಜಗತ್ತಿನಲ್ಲಿ ಜಾತಿ, ಧರ್ಮ ಎಲ್ಲವೂ ಇದೆ. ಗಂಡು ಮತ್ತು ಹೆಣ್ಣು ಎಂಬುದೂ ಇದೆ. ಆದರೆ ರಕ್ತಕ್ಕೆ ಯಾವುದೇ ಜಾತಿ, ಧರ್ಮ, ವರ್ಣ, ಗಂಡು ಅಥವಾ ಹೆಣ್ಣು ಎಂಬ ಬೇಧ ಭಾವವಿಲ್ಲ. ಗಂಡಿನ ರಕ್ತವನ್ನು ಹೆಣ್ಣಿಗೆ ನೀಡಬಹುದು. ಹೆಣ್ಣಿನ ರಕ್ತವನ್ನು ಗಂಡಿಗೂ ನೀಡಬಹುದು. ಇದೊಂದು ಸರ್ವಶ್ರೇಷ್ಠ ಸಾಧನ ಎಂದು ಬಣ್ಣಿಸಿದರು.
ಜಗತ್ತಿನಲ್ಲಿ ರಕ್ತದಾನ ಮಾತ್ರವೇ ಸರ್ವಶ್ರೇಷ್ಠವಾದದ್ದು. ಬೇರೆ ಬೇರೆ ಅಂಗಾಂಗಗಳ ಕಸಿ ಮಾಡಬಹುದು. ಪರ್ಯಾಯವಾಗಿ ಅಂಗಾಂಗಗಳನ್ನು ಅಳವಡಿಸಬಹುದು. ಆದರೆ ರಕ್ತವನ್ನು ಮಾತ್ರ ಯಾವುದೇ ವಸ್ತುವಿನಿಂದ ಮಾಡಲು ಸಾಧ್ಯವಿಲ್ಲ. ಹಾಗಾಗಿ ದಾನದ ಮೂಲಕವೇ ಸಂಗ್ರಹಿಸಬೇಕಾಗಿದೆ. ಭಾರತದಲ್ಲಿ 15 ಲಕ್ಷಕ್ಕೂ ಹೆಚ್ಚಿನ ಯೂನಿಟ್‌ನಷ್ಟು ರಕ್ತದ ಅವಶ್ಯಕತೆ ಇದೆ. ಇದರಲ್ಲಿ 11 ಲಕ್ಷ ಯೂನಿಟ್ ಮಾತ್ರ ಸಂಗ್ರಹವಾಗುತ್ತಿದೆ. ಈ ಪೈಕಿ 10 ಲಕ್ಷ ಯೂನಿಟ್ ರಕ್ತವನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಒಂದು ಲಕ್ಷ ಯೂನಿಟ್ ಸಣ್ಣ ಪುಟ್ಟ ದೋಷದಿಂದಾಗಿ ಹಾನಿಯಾಗುತ್ತದೆ. ಉಳಿದಂತೆ ನಾಲ್ಕೈದು ಲಕ್ಷ ಯೂನಿಟ್‌ನಷ್ಟು ರಕ್ತದ ಕೊರತೆ ಉಂಟಾಗುತ್ತಿದೆ. ಇದನ್ನು ಅರಿತು ಯುವ ಸಮುದಾಯ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ರಕ್ತ ಸಂಗ್ರಹಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸ್ಯಾಂಜೋ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಡಾ.ಅನಿತಾ ವಿಕ್ಟೋರಿಯಾ ನರೋನ್ಹಾ ಮಾತನಾಡಿ, ರಕ್ತ ಕೇವಲ ಆರೋಗ್ಯ ಕಾಯುವ ವಸ್ತುವಲ್ಲ. ಜೀವ ಉಳಿಸುವ ಅಮೃತವಿದ್ದಂತೆ. ಒಂದು ಯೂನಿಟ್ ರಕ್ತದಲ್ಲಿ ಮೂರು ಜನರ ಪ್ರಾಣ ಉಳಿಸಬಹುದಾಗಿದೆ. ರಕ್ತ ಅತ್ಯಂತ ಅವಶ್ಯವಾಗಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಮಾತನಾಡಿ, ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ. ಅದನ್ನು ದಾನದ ರೂಪದಲ್ಲೇ ಪಡೆಯಬೇಕಾಗಿದೆ ಎಂದರು. ನಗರಸಭೆ ಮಾಜಿ ಸದಸ್ಯ ಎಸ್.ಕೆ. ಶಿವಪ್ರಕಾಶ್‌ಬಾಬು, ಹಳೇಬೂದನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶರತ್ ಚಂದ್ರ, ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್, ಬೂದನೂರು ಗ್ರಾ.ಪಂ ಅಧ್ಯಕ್ಷೆ ಮಾನಸಾ, ಸ್ಯಾಂಜೋ ಆಸ್ಪತ್ರೆ ಆಡಳಿತಾಧಿಕಾರಿ ರೆ.ಸಿಸ್ಟರ್ ಡೊಯಲ್ ಇತರರಿದ್ದರು. ಇದೇ ವೇಳೆ 55ಕ್ಕೂ ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಬಳಿಕ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ಹಸ್ತಾಂತರ ಮಾಡಲಾಯಿತು.