

ಮಂಡ್ಯ: ನಗರದ ಎಸ್.ಬಿ ಎಜುಕೇಷನ್ ಸಂಸ್ಥೆಯ ಮಾಂಡವ್ಯ ಪದವಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಶಿಬಿರದಲ್ಲಿ 40 ಯುನಿಟ್ ರಕ್ತಸಂಗ್ರಹಿಸಲಾಯಿತು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಮಾಂಡವ್ಯ ಪ್ರಥಮ ದರ್ಜೆ ಕಾಲೇಜು, ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲೆ-268 ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಇವರಿಗೆ ಪ್ರಮಾಣಪತ್ರ ಮತ್ತು ಸಿಹಿತಿನಿಸು ವಿತರಿಸಲಾಯಿತು. ಅಂತೆಯೇ ಸಂಗ್ರಹಿಸಿದ ರಕ್ತವನ್ನು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ಹಸ್ತಾಂತರಿಸಲಾಯಿತು.
ಇದಕ್ಕೂ ಮುನ್ನ ಶಿಬಿರಕ್ಕೆ ಚಾಲನೆ ನೀಡಿದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಮನುಷ್ಯನ ರಕ್ತಕ್ಕೆ ಪರ್ಯಾಯ ರಕ್ತ ಲಭ್ಯವಿಲ್ಲ. ಅಗತ್ಯಯುಳ್ಳವರಿಗೆ ತಕ್ಷಣವೇ ನೀಡಲು ದಾನಿಗಳು ನೀಡಿದ ರಕ್ತವನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಬೇಡಿಕೆಗೆ ಅನುಗುಣವಾಗಿ ರಕ್ತ ಲಭ್ಯವಾಗುತ್ತಿಲ್ಲ. ಅಪಘಾತದಲ್ಲಿ ಗಾಯಗೊಂಡವರು ಹಾಗೂ ಗರ್ಭಿಣಿಯರಿಗೆ ಬೇಕಾಗಿರುತ್ತದೆ. ಇಂತಹ ಸನ್ನಿವೇಶದಲ್ಲಿ ಸಂಗ್ರಹ ಮಾಡಿದ ರಕ್ತ ಉಪಯುಕ್ತವಾಗುತ್ತದೆ ಎಂದು ನುಡಿದರು.
ರೆಡ್‌ಕ್ರಾಸ್ ನಿರ್ದೇಶಕ ಕೆ.ಟಿ.ಹನುಮಂತು ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆ ರಕ್ತದಾನಕ್ಕೆ ಬಹಳ ಹೆಸರುವಾಸಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಬೇಡಿಕೆಗೆ ಅನುಸಾರ ರಕ್ತ ಲಭ್ಯವಾಗುತ್ತಿಲ್ಲ. ದಾನಿಗಳು ಹೊಸದಾಗಿ ಹುಟ್ಟುಕೊಳ್ಳುತ್ತಿಲ್ಲ. ಮಿಮ್ಸ್‌ಗೆ ಪ್ರತಿ ತಿಂಗಳು ಸುಮಾರು 1 ಸಾವಿರ ಯುನಿಟ್ ರಕ್ತ ಬೇಕಾಗಿದೆ. ಆದರೆ 700 ರಿಂದ 800 ಯುನಿಟ್ ಮಾತ್ರ ಲಭ್ಯವಾಗುತ್ತಿದೆ. ಇಡೀ ದೇಶದಲ್ಲಿ ನೀರಿನ ಜತೆಗೆ ರಕ್ತದಾನದ ಕೊರತೆಯು ಹೆಚ್ಚಾಗುತ್ತಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ಸ್ಪಂದನೆ ಸಿಗುತ್ತಿಲ್ಲ. ಆದ್ದರಿಂದ ಶಿಕ್ಷಣ ಸಂಸ್ಥೆಗಳು ಶಿಬಿರ ಆಯೋಜನೆಗೆ ಹೆಚ್ಚು ಒತ್ತು ನೀಡುತ್ತೇವೆ ಎಂದು ತಿಳಿಸಿದರು.
ರೆಡ್‌ಕ್ರಾಸ್ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ಮಾಂಡವ್ಯ ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಶಿವಕುಮಾರ್, ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಮಹೇಶ್, ಬಿ.ಇಡಿ ಪ್ರಾಂಶುಪಾಲೆ ಡಾ.ಸುಮಾರಾಣಿ, ಮಿಮ್ಸ್ ರಕ್ತನಿಧಿ ಕೇಂದ್ರದ ಮಹಮದ್ ರಫೀಕ್ ಇತರರಿದ್ದರು.