ರಕ್ತದ ಅಭಾವ ನೀಗಿಸಲುರಕ್ತದಾನಿಗಳ ಸಂಘದಿಂದ ಶಿಬಿರ

blood camp
Published on

ಗಂಗೊಳ್ಳಿ: ಕರೊನಾ ಭೀತಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರಗಳು ನಡೆಯದೆ ರಕ್ತನಿಧಿ ಕೇಂದ್ರಗಳಲ್ಲಿ ರಕ್ತ ಸಂಗ್ರಹಣೆ ಇಳಿಮುಖವಾಗುತ್ತಿದೆ. ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ರಕ್ತದ ಅಭಾವವನ್ನು ಕಡಿಮೆ ಮಾಡಲು ಸಹಕಾರ ನೀಡಬೇಕೆಂಬ ಸರ್ಕಾರದ ಮನವಿಗೆ ಓಗೊಟ್ಟು, ಗಂಗೊಳ್ಳಿಯ ರಕ್ತದಾನಿಗಳು, ರಕ್ತದಾನಿಗಳ ಸಂಘವು ರಕ್ತದಾನ ಶಿಬಿರ ನಡೆಸಿದೆ.

ಗಂಗೊಳ್ಳಿಯ ಕರಾವಳಿ ಸ್ವಯಂಪ್ರೇರಿತ ರಕ್ತದಾನಿಗಳ ಸಂಘವು ಜಿಲ್ಲಾ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತದ ಅನುಮತಿ ಪಡೆದು ಬುಧವಾರ ಶಿಬಿರ ಆಯೋಜಿಸಿ ರಕ್ತ ಸಂಗ್ರಹಿಸಿದೆ. ಕೇವಲ ಮೊಬೈಲ್ ಸಂದೇಶದ ಮೂಲಕ ರಕ್ತದಾನಿಗಳು ಸ್ವಯಂಪ್ರೇರಿತರಾಗಿ ಬಂದು ರಕ್ತದಾನ ಮಾಡಿರುವುದು, ಅದರಲ್ಲೂ ಕರೊನಾ ನಿಯಂತ್ರಣದಲ್ಲಿ ಶ್ರಮಿಸುತ್ತಿರುವ ಪೊಲೀಸರೂ ರಕ್ತದಾನ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.

ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಬೈಂದೂರು ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ, ಉಡುಪಿ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ.ವೀಣಾ ಕುಮಾರಿ, ಕುಂದಾಪುರ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ, ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಭೀಮಾಶಂಕರ ಎಸ್., ರಕ್ತದಾನಿಗಳ ಸಂಘದ ದಿವಾಕರ ಎನ್.ಖಾರ್ವಿ, ಬಿ.ರಾಘವೇಂದ್ರ ಪೈ, ಚರಣ್ ಖಾರ್ವಿ, ನಾಗರಾಜ ಖಾರ್ವಿ ಕೊಲ್ಲೂರು, ಚಂದ್ರ ಖಾರ್ವಿ, ಉಪ್ಪುಂದ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ ಖಾರ್ವಿ, ರಕ್ತನಿಧಿ ಕೇಂದ್ರದ ಸಿಬ್ಬಂದಿ, ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

60 ಮಂದಿಯಿಂದ ರಕ್ತದಾನ:ಜಿಲ್ಲಾಡಳಿತದ ನಿರ್ದೇಶನದಂತೆ ರಕ್ತದಾನಿಗಳಿಗೆ ಕೋವಿಡ್-19 ತಪಾಸಣೆ, ಮುಂಜಾಗ್ರತಾ ಕ್ರಮ ಅನುಸರಿಸಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ನೋಂದಣಿ, ತಪಾಸಣೆ, ರಕ್ತದಾನ ಸಂದರ್ಭಗಳಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಯಿತು. ಕೇವಲ 50 ಮಂದಿಗೆ ಸೀಮಿತಗೊಳಿಸಿ ಆಯೋಜಿಸಲಾಗಿದ್ದ ಶಿಬಿರದಲ್ಲಿ 60 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದ್ದರೆ, ಇನ್ನು ಕೆಲವರು ರಕ್ತದಾನ ಮಾಡಲು ಸಾಧ್ಯವಾಗದೆ ನಿರಾಸೆಯಿಂದ ಮರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net