ರಕ್ತ ಮನುಷ್ಯನಿಗೆ ಜೀವ ಸಂಜೀವಿನಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಅಭಿಮತ

Blood donation camp in Bevinahalli village Mandya
Published on

ಮಂಡ್ಯ: ರಕ್ತಕ್ಕೆ ಪರ್ಯಾಯ ಔಷಧವಿಲ್ಲ. ಮನುಷ್ಯನಿಗೆ ರಕ್ತ ಜೀವಸಂಜೀವಿನಿಯಾಗಿ ಕೆಲಸ ಮಾಡುತ್ತದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ತಿಳಿಸಿದರು.

ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಬಾಗಲಕೋಟೆ ತೋಟಗಾರಿಕೆ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಲಯನ್ಸ್ ಕ್ಲಬ್ ಆಫ್ ಸೆಂಟೇನಿಯಲ್, ಮಿಮ್ಸ್ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಕ್ತದಾನ ಶ್ರೇಷ್ಟದಾನವೆಂದು ಅರ್ಥೈಸಿಕೊಂಡು ಸದೃಢವಾದ ದೇಹದಲ್ಲಿ ಆರೋಗ್ಯವಿರುತ್ತದೆ ಎಂಬ ಭಾವನೆಯೊಡನೆ ಆರೋಗ್ಯವಂತ ಮನುಷ್ಯರು 18 ರಿಂದ 60 ವರ್ಷ ವಯೋಮಿತಿಯ ಜನರು ನಿಯಮಿತವಾಗಿ ರಕ್ತದಾನ ಮಾಡಬಹುದಾಗಿದೆ ಎಂದು ಸಲಹೆ ನೀಡಿದರು.

ಅವಘಡ ಸಂಭವಿಸಿದಾಗ ಅಥವಾ ಸಾಂಕ್ರಾಮಿಕ ರೋಗಗಳು ಉಲ್ಬಣಿಸಿದಾಗ ರಕ್ತದ ಮಹತ್ವ ಹೆಚ್ಚಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಮತ್ತೊಂದು ಜೀವವನ್ನು ಉಳಿಸುವ ಕಾಯಕಕ್ಕೆ ಮಾನವೀಯತೆಯಿಂದ ರಕ್ತದಾನ ಮಾಡಬೇಕು. ಸಾಮಾಜಿಕ ಪಿಡುಗು ನಿರ್ಮೂಲನೆಗೆ ಯುವ ಮನಸ್ಸು ಸನ್ನದ್ಧವಾಗಬೇಕಿದೆ. ದುಶ್ಚಟಕ್ಕೆ ಬಲಿಯಾಗದೆ ಉತ್ತಮ ಆರೋಗ್ಯವನ್ನು ಕಾಯ್ದುಕೊಂಡು ಮನುಕುಲ ಸಂರಕ್ಷಣೆಯ ಮಹತ್ವಕ್ಕೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ನಿರ್ದೇಶಕರಾದ ಮಂಗಲ ಎಂ.ಯೋಗೀಶ್, ರಂಗಸ್ವಾಮಿ, ಎನ್‌ಎಸ್‌ಎಸ್ ಅಧಿಕಾರಿ ಮಂಜುನಾಥ್, ಲಯನ್ಸ್ ಕ್ಲಬ್ ಆಫ್ ಸೆಂಟೇನಿಯಲ್ ಅಧ್ಯಕ್ಷೆ ಮೀನಾ ಇತರರಿದ್ದರು. ಇದೇ ವೇಳೆ 36 ಜನರು ರಕ್ತದಾನ ಮಾಡಿದರು. ಅವುಗಳನ್ನು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ರಕ್ತನಿಧಿ ಕೇಂದ್ರಕ್ಕೆ ಹಸ್ತಾಂತರ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net