

ಚಿಕ್ಕಬಳ್ಳಾಪುರ; ದತ್ತಿ ದಿನಾಚರಣೆಯಲ್ಲಿ ಒಂದೇ ದಿನ ಬರೋಬ್ಬರಿ 2148 ಯುನಿಟ್ ರಕ್ತವನ್ನು ಸಂಗ್ರಹಿಸುವ ಮೂಲಕ ಇಲ್ಲಿನ ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಯು ರಾಜ್ಯದಲ್ಲಿ ದಾಖಲೆ ನಿರ್ಮಿಸಿದೆ.
ಚಿಕ್ಕಬಳ್ಳಾಪುರದಲ್ಲಿನ ಸಿವಿವಿ ಕ್ಯಾಂಪಸ್‌ನಲ್ಲಿ ಮಾಜಿ ಶಾಸಕ ಸಿ.ವಿ.ವೆಂಕಟರಾಯಪ್ಪ ಜಯಂತಿ ಮತ್ತು ದತ್ತಿ ದಿನಾಚರಣೆ ಅಂಗವಾಗಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವನ್ನು ಕೈಗೊಳ್ಳಲಾಗಿತ್ತು. ಬೆಲಿಗ್ಗೆ 8.30 ರಿಂದ ರಾತ್ರಿ 7 ರವರೆಗೆ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳು, ಸಂಸ್ಥೆಯ ಸಿಬ್ಬಂದಿ, ಸಂಘಟನೆಗಳ ಮುಖಂಡರು, ರಾಜಕಾರಣಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದು ರಕ್ತದಾನ ಮಾಡಿದ್ದಾರೆ. ಇದರೊಂದಿಗೆ 2148 ಯುನಿಟ್ ರಕ್ತ ಸಂಗ್ರಹವಾಗಿದೆ. ಇನ್ನು ಪ್ರತಿವರ್ಷ ಶಿಬಿರವನ್ನು ಕೈಗೊಂಡು ಹೆಚ್ಚಿನ ರಕ್ತ ಸಂಗ್ರಹದ ಮೂಲಕ ಸಂಸ್ಥೆಯು ದಾಖಲೆ ನಿರ್ಮಿಸುತ್ತಿದ್ದು ಈ ಬಾರಿಯೂ ಉತ್ತಮ ಸಾಧನೆಯನ್ನು ತೋರಲಾಗಿದೆ.
ರಕ್ತದಾನ ಮಾಡುವುದರಿಂದ ವ್ಯಕ್ತಿಯ ಆರೋಗ್ಯ ಸುಧಾರಣೆಯಾಗುತ್ತದೆ. ದೇಹದಲ್ಲಿನ ಕೊಬ್ಬಿನಾಂಶ ಕಡಿಮೆಯಾಗುತ್ತದೆ. ಹೊಸ ರಕ್ತಕಣಗಳು ಉತ್ಪತ್ತಿಯಾಗುತ್ತದೆ. ಇದಕ್ಕೆ ಆರೋಗ್ಯವಂತರು ನಿಗದಿತ ಅವಧಿಗೊಮ್ಮೆ ರಕ್ತದಾನ ಮಾಡಬೇಕು. ಇದರಿಂದ ತುರ್ತು ಚಿಕಿತ್ಸೆಯ ನಿರೀಕ್ಷೆಯಲ್ಲಿರುವ ರೋಗಿಗಳ ಪ್ರಾಣವು ಉಳಿಯುತ್ತದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಸಲಹೆ ನೀಡಿದರು.
ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಯು ಶೈಕ್ಷಣಿಕ ಚಟುವಟಿಕೆಯ ಜತೆಗೆ ಸಾಮಾಜಿಕ ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಇಂತಹ ಮಹಾತ್ಕಾರ್ಯಗಳು ನಿರಂತರವಾಗಿ ಮುಂದುವರೆಯುತ್ತಿರಬೇಕು ಎಂದು ಸಲಹೆ ನೀಡಿದರು.
ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಯ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಮಾತನಾಡಿ, ಸಂಸ್ಥೆಯ ವತಿಯಿಂದ ಪ್ರತಿ ವರ್ಷ ರಕ್ತದಾನ ಶಿಬಿರಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗಿನ್ನಿಸ್ ದಾಖಲೆ ಸಾಧನೆಗೈಯ್ಯುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು. ರಕ್ತದಾನಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಆರ್.ವೆಂಕಟೇಶ್, ಮಾಧ್ಯಮ ವಕ್ತಾರ ಎನ್.ವೆಂಕಟೇಶ್ ಮತ್ತಿತರರು ಇದ್ದರು.