

ಮಂಡ್ಯ: ರಕ್ತದಾನ ಅವಶ್ಯಕವಾದ ಕಾರ್ಯವಾಗಿದೆ ಎಂದು ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ತಿಳಿಸಿದರು.
ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ನಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಮಿಮ್ಸ್ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಮಿಮ್ಸ್‌ನ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಗೋ ಗ್ರೀನರ್ಸ್ ವಾಕ್ಯದೊಂದಿಗೆ ರಕ್ತದಾನ ಶಿಬಿರ ಆಯೋಜನೆ ಮಾಡಿರುವುದು ಅಭಿನಂದನಾ ವಿಚಾರವಾಗಿದೆ. ಪ್ರಕೃತಿ ಮತ್ತು ರೋಗಿಗಳಿಗೆ ಬೇಕಾದ ಅವಶ್ಯಕತೆ ವಿಚಾರ ಇಟ್ಟುಕೊಂಡು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವವರಿಗೆ ಒಂದು ಗಿಡ ಕೊಡುತ್ತಿದ್ದಾರೆ. ಪ್ರತಿ ವರ್ಷ ಇದೇ ರೀತಿ ಇನ್ನು ಹೆಚ್ಚಿನ ರೀತಿ ರಕ್ತದಾನ ಮಾಡುವ ಕಾರ್ಯಕ್ರಮವನ್ನು ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಹಮ್ಮಿಕೊಳ್ಳಲಿ ಎಂದು ಹೇಳಿದರು.
ಮಿಮ್ಸ್ ಪ್ರಾಂಶುಪಾಲ ಡಾ.ತಮ್ಮಣ್ಣ ಮಾತನಾಡಿ, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುತ್ತಿದ್ದಾರೆ. ರಕ್ತದಾನ ಎಲ್ಲ ದಾನಗಳಿಗಿಂತ ಮಹತ್ತರವಾದದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ರಕ್ತದಾನ ಮಾಡುವ ಮನೋಭಾವನೆ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಡಾ.ಮಾಲತಿ, ಡಾ.ಮಂಜುನಾಥ್, ಡಾ.ಮುರಳೀಧರ್ ಭಟ್, ರಫೀಕ್ ಇತರರಿದ್ದರು.