

ಮಡಿಕೇರಿ: ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ(ರಿ) ಸಂಸ್ಥೆಯ ಎರಡನೇ ವಾರ್ಷಿಕೋತ್ಸವದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣೆ ಶಿಬಿರ ಮಡಿಕೇರಿಯ ರಾಜ್ ದರ್ಶನ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಉದ್ಯಮಿ ಮೋಹನ್ ದಾಸ್ ಮಾತನಾಡಿ, ಸಂಸ್ಥೆಯ ಕಾರ್ಯವೈಖರಿ ನಿಜಕ್ಕೂ ಪ್ರೋತ್ಸಾಹದಾಯಕ ವಿಚಾರ. ತುರ್ತು ಪರಿಸ್ಥಿತಿಗಳಲ್ಲಿ ರಕ್ತವನ್ನು ಒದಗಿಸುವ ಕಾರ್ಯ ಶ್ರೇಷ್ಠವಾದುದು. ಜತೆಗೆ ಉಚಿತ ಕಣ್ಣಿನ ತಪಾಸಣೆ ಹಮ್ಮಿಕೊಂಡಿರುವುದು ಸಾರ್ವಜನಿಕರಿಗೆ ಬಹಳಷ್ಟು ಸಹಕಾರಿಯಾಗಿದೆ. ಸಂಸ್ಥೆಯ ವತಿಯಿಂದ ಮತ್ತಷ್ಟು ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಆಶಿಸಿದರು.
ಬನವಾಸಿ ಕನ್ನಡಿಗರು ಸಂಸ್ಥೆಯ ಜೈಕಿರಣ್ ಮಾತನಾಡಿ, ಕೊಡಗಿನ ಮಾತೆ ಕಾವೇರಿ ತಾಯಿ ಪವಿತ್ರ ನೆಲದಲ್ಲಿ ಸಾಮಾಜಿಕವಾಗಿ ಕೆಲಸ, ಕಾರ್ಯಗಳನ್ನು ಮಾಡಲು ಬಹಳ ಹೆಮ್ಮೆಯೆನಿಸುತ್ತದೆ ಎಂದರು.
ಕಾರುಣ್ಯ ನಿಧಿ ಕರ್ನಾಟಕ ಸಂಸ್ಥೆಯ ಜಲೀಲ್, ರಕ್ತದ ಕೊರತೆ, ಲಭ್ಯತೆ ಹಾಗೂ ಜನರಲ್ಲಿರುವ ಸಹಕಾರ ಮನೋಭಾವದ ಕುರಿತು ಮಾತನಾಡಿದರು. ಸಮಾಜ ಸೇವಕ ಅರುಣ್ ಮಾತನಾಡಿ, ಕಡಗದಾಳು ಗ್ರಾಮದಲ್ಲಿ ಮುಂದಿನ ದಿನಗಳಲ್ಲಿ ರಕ್ತದಾನ ಶಿಬಿರ ನಡೆಸುವ ಮೂಲಕ ನಿಮ್ಮ ಕಾರ್ಯಕ್ರಮಗಳಿಗೆ ಕೈಜೋಡಿಸುತ್ತೇವೆ ಎಂದು ಭರವಸೆ ನೀಡಿದರು. ರಕ್ತನಿಧಿ ಘಟಕದ ಮುಖ್ಯಸ್ಥೆ ಡಾ.ಗಾಯತ್ರಿ ರಕ್ತದಾನದ ಮಹತ್ವ, ರಕ್ತದ ಗುಂಪುಗಳ ವರ್ಗೀಕರಣ ಮುಂತಾದ ವಿಚಾರಗಳ ಕುರಿತು ಮಾಹಿತಿ ಒದಗಿಸಿದರು.
ಕೂಗ್ ಬ್ಲಡ್ ಫೌಂಡೇಷನ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಮೀರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದು ನನ್ನೊಬ್ಬನ ಪ್ರಯತ್ನವಲ್ಲ. ಎಲ್ಲರ ಸಲಹೆ, ಸೂಚನೆ, ಸಹಕಾರದಿಂದ ಈಗ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಮುಂದೆ ಇನ್ನಷ್ಟು ಶಿಬಿರಗಳನ್ನು ನಡೆಸುವ ಮೂಲಕ, ಜನರಿಗೆ ನೆರವಾಗಬೇಕು ಎಂದರು.
ಉಚಿತ ಕಣ್ಣಿನ ತಪಾಸಣೆಯ ಮುಂದಾಳತ್ವ ವಹಿಸಿದ ನೇತ್ರ ಅಪ್ಟಿಕಲ್ಸ್‌ನ ಅಝರ್ ಕಣ್ಣಿನ ದಾನದ ಮಹತ್ವ ಹಾಗೂ ಮನುಷ್ಯನಿಗೆ ಕಣ್ಣಿನ ಪ್ರಾಮುಖ್ಯತೆ, ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು.
೫೨ ಯೂನಿಟ್ ರಕ್ತ ಸಂಗ್ರಹವಾಗಿದ್ದು, ಗ್ರಾಮಾಂತರ ಠಾಣಾ ಉಪನಿರೀಕ್ಷಕ ಅನೂಪ್ ಮಾದಪ್ಪ ರಕ್ತದಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮಡಿಕೇರಿ ಅಲ್ಲದೆ ಬೆಂಗಳೂರು, ಮೈಸೂರು ಮತ್ತು ಹೊರಜಿಲ್ಲೆಗಳಿಂದ ಆಸಕ್ತ ರಕ್ತದಾನಿಗಳು ಆಗಮಿಸಿದ್ದು ಸೇವಾ ಮನೋಭಾವಕ್ಕೆ ಸಾಕ್ಷಿಯಾಯಿತು. ಸಾರ್ವಜನಿಕರು ಉಚಿತ ಕಣ್ಣಿನ ತಪಾಸಣೆಯ ಅನುಕೂಲ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಮೈಸೂರು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಟಿ.ತ್ಯಾಗರಾಜ್, ಬೆಂಗಳೂರಿನ ಬನವಾಸಿ ಕನ್ನಡಿಗರು ತಂಡ, ಕರುನಾಡ ರಕ್ತ ಸೈನಿಕರು, ದೇವೇಂದ್ರ ಪರಿಹಾರೀಯ, ಶಕ್ತಿ ಹಿರಿಯ ನಾಗರಿಕರ ವಸತಿ ನಿಲಯದ ಸತೀಶ್, ವಿಕಾಸ್ ಜನಸೇವಾ ಟ್ರಸ್ಟಿನ ರಮೇಶ್, ಆರಕ್ಷಕ ಬಿ.ಎಂ.ರಾಮಪ್ಪ, ಎಸ್.ಕೆ.ಕಿರಣ್ ಅವರ ಅತ್ಯುತ್ತಮ ಸಮಾಜಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಮ್ಮ ಕೊಡಗು ತಂಡದ ಸಂಸ್ಥಾಪಕ ನೌಶಾದ್ ಜನ್ನತ್, ಸಂಸ್ಥೆಯ ಪ್ರಮುಖರಾದ ವಿನು, ರಂಜಿತ್ ಕವಲಪಾರ, ಮಹಿಳಾ ಘಟಕದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿದ ಎಲ್ಲಾ ರಕ್ತದಾನಿಗಳಿಗೆ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಯಿತು.