

ಎಚ್.ಎಸ್.ಭರತ್‌ಕುವಾರ್ ಶ್ರೀರಂಗಪಟ್ಟಣ
ತಾಲೂಕಿನ ಅರಕೆರೆ ಪೊಲೀಸ್ ಠಾಣೆ ಸಿಬ್ಬಂದಿ ರಕ್ತಸಂಗ್ರಹದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಹಿರಿಯ ಅಧಿಕಾರಿಗಳು, ಬೇರೆ ಠಾಣೆ ಸಹೋದ್ಯೋಗಿ ಹಾಗೂ ಸಾರ್ವಜನಿಕರ ಸಹಕಾರದಿಂದ ಒಂದೇ ದಿನದಲ್ಲಿ 112 ಯೂನಿಟ್ ರಕ್ತ ಸಂಗ್ರಹಿಸಿದ್ದಾರೆ. ಇದು ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಹಿಂದೆ ನಡೆದಿರುವಂತಹ ಶಿಬಿರದ ದಾಖಲೆಯನ್ನು ಅಳಿಸಿ ಹಾಕಿದೆ.
ಜಿಲ್ಲೆಯ ಜನರು ಒರಟು ಎನ್ನಿಸಿಕೊಂಡರೂ ರಕ್ತದಾನ ಮಾಡುವ ವಿಚಾರದಲ್ಲಿ ಯಾವತ್ತಿಗೂ ಹಿಂದೆ ಬಿದ್ದಿಲ್ಲ. ಅವಶ್ಯಕ ಎನ್ನಿಸಿದಾಗಲೆಲ್ಲ ಶಿಬಿರ ಅಥವಾ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುತ್ತಾರೆ. ಇದರಿಂದಾಗಿ ರಕ್ತಕ್ಕೆ ತೀವ್ರ ಸಮಸ್ಯೆ ಎದುರಾದ ಉದಾಹರಣೆಗಳು ತೀರಾ ಕಡಿಮೆ ಎನ್ನಿಸಿಕೊಂಡಿದೆ. ಇದೀಗ ಅರಕೆರೆ ಪೊಲೀಸ್ ಸಿಬ್ಬಂದಿ ಕೂಡ ಠಾಣೆಯಲ್ಲಿ ಶಿಬಿರ ಆಯೋಜಿಸಿ ರಕ್ತ ಸಂಗ್ರಹಿಸುವ ಮೂಲಕ ಮಾದರಿ ಎನ್ನಿಸಿಕೊಂಡಿದ್ದಾರೆ.
ಹಿರಿಯ ಅಧಿಕಾರಿಗಳ ಸಾಥ್: ಅರಕೆರೆ ಠಾಣೆ ಸಿಬ್ಬಂದಿ ಶಿಬಿರ ಆಯೋಜಿಸುವ ಬಗ್ಗೆ ಹಿರಿಯ ಅಧಿಕಾರಿಗಳ ಸಲಹೆ ಕೇಳಿದಾಗ, ಅತ್ಯುತ್ತಮ ಸೇವೆಗೆ ಒಪ್ಪಿಗೆ ನೀಡಿದ್ದರು. ಪರಿಣಾಮ ವ್ಯಾಪಕ ಪ್ರಚಾರ ಮಾಡಿದ್ದರು. ಅರಕೆರೆ, ಕೆಆರ್‌ಎಸ್ ಹಾಗೂ ಇತರೆ ಠಾಣೆಯ ಸಿಬ್ಬಂದಿ ರಕ್ತದಾನ ಮಾಡಿದ್ದಾರೆ. ಇವರಿಗೆ ಸಾಥ್ ನೀಡಿದ ಕೆಆರ್‌ಎಸ್ ವೃತ್ತ ನಿರೀಕ್ಷಕ ಪುನೀತ್, ಅರಕರೆ ಠಾಣೆ ಪಿಎಸ್‌ಐ ವಿನೋದ್ ಹಾಗೂ ಕೆಆರ್‌ಎಸ್ ಠಾಣೆ ಪಿಎಸ್‌ಐ ರಮೇಶ್ ಕರ್ಕಿಕಟ್ಟಿ ರಕ್ತದಾನ ಮಾಡಿದರು. ಒಟ್ಟಾರೆ 43 ಜನ ಪೊಲೀಸ್ ಸಿಬ್ಬಂದಿ ಹಾಗೂ 6 ಜನ ಮಹಿಳೆಯರು ಸೇರಿದಂತೆ 69 ಜನ ಸಾರ್ವಜನಿಕರು ರಕ್ತದಾನದಲ್ಲಿ ಪಾಲ್ಗೊಂಡರು. ರಕ್ತದಾನ ಮಾಡಿದ ಎಲ್ಲರಿಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಶಿಬಿರಕ್ಕೆ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ ಭೇಟಿ ನೀಡಿ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದರು. ಸಂಗ್ರಹಿಸಿದ ರಕ್ತವನ್ನು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ಹಸ್ತಾಂತರ ಮಾಡಲಾಯಿತು.
ಪೊಲೀಸ್ ಠಾಣೆ ಎಂದರೆ ಆತಂಕಪಡುವವರೇ ಹೆಚ್ಚು. ಆದರೆ ರಕ್ತದಾನ ಶಿಬಿರದಂತಹ ವಿಭಿನ್ನ ಪ್ರಯತ್ನ ಜನಸಾಮಾನ್ಯರು ಹಾಗೂ ಪೊಲೀಸರ ನಡುವಿನ ಬಾಂಧವ್ಯವನ್ನು ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ಅರಕೆರೆ ಠಾಣೆ ಸಿಬ್ಬಂದಿ ಸೇವೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಾತ್ರವಾಗಿದ್ದು, ಇಂತಹ ಜನಸ್ನೇಹಿ ಕಾರ್ಯಕ್ರಮದ ಪ್ರಯತ್ನ ಎಲ್ಲ ಠಾಣೆಯಲ್ಲಿಯೂ ಆಗಬೇಕಿದೆ.
ರಕ್ತಕ್ಕೆ ಹೆಚ್ಚಿರುವ ಬೇಡಿಕೆ
ಜಿಲ್ಲೆಯಲ್ಲಿ ರಕ್ತಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ. ಮಂಡ್ಯ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ರೋಗಿಗಳು ಹಾಗೂ ಗಭಿರ್ಣಿಯರು ಮಿಮ್ಸ್‌ಗೆ ದಾಖಲಾಗುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರತಿ ತಿಂಗಳು ಜಿಲ್ಲೆಗೆ ಸುಮಾರು 1000 ಯೂನಿಟ್ ರಕ್ತದ ಅವಶ್ಯಕತೆ ಇರುತ್ತದೆ. ಅದರಂತೆಯೇ ಇದಕ್ಕೆ ಪೂರಕವಾಗಿಯೇ ಜಿಲ್ಲೆಯಲ್ಲಿ ಶಿಬಿರಗಳು ಆಯೋಜನೆಗೊಳ್ಳುತ್ತಿರುತ್ತವೆ.
ಹಿಂದಿನ ವರ್ಷಗಳ ಇತಿಹಾಸವನ್ನು ಗಮನಿಸಿದರೆ ಜಿಲ್ಲೆಯಲ್ಲಿ ಶೇ.70ರಷ್ಟು ಶಿಬಿರಗಳನ್ನು ಸಂಘಟನೆಗಳು ಆಯೋಜಿಸುತ್ತಿವೆ. ಅಂತೆಯೇ ಶೇ.10ರಷ್ಟು ಜನರು ಸ್ವಯಂ ಪ್ರೇರಿತರಾಗಿ ಹೋಗಿ ರಕ್ತದಾನ ಮಾಡುತ್ತಾರೆ. ಇನ್ನು ಶೇ.20ರಷ್ಟನ್ನು ರೋಗಿಗಳಿಗೆ ಕೊಡುವ ರಕ್ತಕ್ಕೆ ಪರ್ಯಾಯವಾಗಿ ಅವರ ಸಂಬಂಧಿಕರಿಂದ ಪಡೆದುಕೊಳ್ಳಲಾಗುತ್ತಿದೆ. ಈ ಹಿಂದೆ ಮಂಡ್ಯ ನಗರದ ಠಾಣೆಯಲ್ಲಿ ಶಿಬಿರ ಆಯೋಜನೆಗೊಂಡಿದ್ದವು. ಆ ಸಮಯದಲ್ಲಿ 60 ರಿಂದ 70 ಯೂನಿಟ್ ರಕ್ತ ಸಂಗ್ರಹಿಸಲಾಗಿತ್ತು. ಇದೀಗ ಅರಕೆರೆ ಪೊಲೀಸ್ ಠಾಣೆಯಲ್ಲಿ ರಕ್ತ ಸಂಗ್ರಹದಲ್ಲಿ ದಾಖಲೆ ಬರೆದಿದೆ. ಅದರಲ್ಲಿಯೂ ಗ್ರಾಮೀಣ ಭಾಗದ ಠಾಣೆಯಲ್ಲಿ ಆಯೋಜನೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿರುವ ವಿಶೇಷ.