

ಮಂಡ್ಯ: ನಿತ್ಯಸಚಿವ ಕೆ.ವಿ.ಶಂಕರಗೌಡ ಸ್ಮರಣಾರ್ಥ ನಗರದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 183 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಜನತಾ ಶಿಕ್ಷಣ ಟ್ರಸ್ಟ್, ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ, ಎನ್‌ಎಸ್‌ಎಸ್, ಎನ್‌ಸಿಸಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ರಕ್ತದಾನ ಮಾಡಿದರು. ಸಂಗ್ರಹಿಸಿದ ರಕ್ತವನ್ನು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ರಕ್ತನಿಧಿ ಕೇಂದ್ರಕ್ಕೆ ಹಸ್ತಾಂತರ ಮಾಡಲಾಯಿತು. ರಕ್ತದಾನಿಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಶಿಬಿರ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಇತ್ತೀಚಿನ ದಿನಗಳಲ್ಲಿ ರಕ್ತದ ಅವಶ್ಯಕತೆ ಬಹಳಷ್ಟಿದೆ. ಅಗತ್ಯಯುಳ್ಳವರಿಗೆ ಸಮಯಕ್ಕೆ ಸರಿಯಾಗಿ ರಕ್ತ ಸಿಗುತ್ತಿಲ್ಲ. ಇಂತಹ ಶಿಬಿರದಿಂದ ರಕ್ತ ಪೂರೈಕೆಗೆ ನೆರವಾಗುತ್ತಿದೆ. ಒರ್ವ ದಾನಿ ನೀಡುವ ರಕ್ತದಿಂದ 3 ರಿಂದ 4 ಜನರ ಜೀವ ಉಳಿಸಬಹುದಾಗಿದೆ. ಆ ಪುಣ್ಯ ರಕ್ತದಾನಿಗಳಿಗೆ ಸಲ್ಲುತ್ತದೆ. ಪಿಇಎಸ್ ಶಿಕ್ಷಣ ಸಂಸ್ಥೆ ಕಟ್ಟಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಉದ್ಯೋಗ ದೊರಕುವಂತೆ ಮಾಡಿದ ನಿತ್ಯಸಚಿವ ಕೆ.ವಿ.ಶಂಕರಗೌಡ ಅವರನ್ನು ಮರೆಯಲು ಸಾಧ್ಯವಿಲ್ಲ. ರಂಗಭೂಮಿ ಮೂಲಕ ನಾಟಕ ಪ್ರದರ್ಶಿಸಿ ಸಂಗ್ರಹವಾದ ಹಣದಲ್ಲಿ ಶಿಕ್ಷಣ ಸಂಸ್ಥೆ ಅಭಿವೃದ್ಧಿಪಡಿಸಿದರು. ಇಂತಹ ಮಹಾನ್ ವ್ಯಕ್ತಿಯನ್ನು ಸದಾ ಸ್ಮರಿಸೋಣ ಎಂದು ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಪಿಇಎಸ್ ಕಾಲೇಜಿನಲ್ಲಿ ಪ್ರತಿ ವರ್ಷ ರಕ್ತದಾನ ಶಿಬಿರ ಆಯೋಜನೆಗೊಳ್ಳುತ್ತದೆ. ಇದಕ್ಕೆ ರೆಡ್‌ಕ್ರಾಸ್ ಸಂಸ್ಥೆ ಸಹಕಾರ ನೀಡುತ್ತಿದೆ. ಎಲ್ಲ ವಿದ್ಯಾರ್ಥಿಗಳಲ್ಲೂ ರಕ್ತದಾನ ಮಾಡುವ ಮನೋಭಾವ ಹೆಚ್ಚಿಸಬೇಕಿದೆ. ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರ ಸಾಧನೆ ಮತ್ತು ಕೊಡುಗೆ ಎಂದೆಂದಿಗೂ ಅಮರ. ಅವರನ್ನು ಸ್ಮರಿಸಿಕೊಳ್ಳದ ದಿನಗಳೇ ಇಲ್ಲ. ನಾಡಿನುದ್ದಗಲಕ್ಕೂ ಸದಾ ಪ್ರಾತ:ಸ್ಮರಣೀಯರು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಮಂಜುನಾಥ, ಉಪಪ್ರಾಂಶುಪಾಲ ಡಾ.ಎಸ್.ಕೆ.ವೀರೇಶ್, ಯುವ ರೆಡ್‌ಕ್ರಾಸ್ ಘಟಕ ಕಾರ್ಯಕ್ರಮಾಧಿಕಾರಿ ಪ್ರೊ.ಜಯರಾಂ, ಪ್ರೊ.ಮರಿಯಯ್ಯ, ಡಾ.ಶಿವಕುಮಾರ್, ಡಾ.ರಮೇಶ್, ಪ್ರೊ.ಜೋಗಿಗೌಡ, ರೆಡ್‌ಕ್ರಾಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ನಿರ್ದೇಶಕ ಷಡಕ್ಷರಿ, ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್, ರಕ್ತನಿಧಿಕೇಂದ್ರ ರಫಿಕ್, ರಾಜು, ರಾಮು, ಜಗದೀಶ್ ಹಾಜರಿದ್ದರು.