

ಮಂಡ್ಯ: ನಗರದ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 150 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಇದರೊಂದಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಮಾದರಿ ಕಾರ್ಯವನ್ನು ಈ ಬಾರಿಯೂ ಯಶಸ್ವಿಗೊಳಿಸಿದರು.
ಕಾಲೇಜಿನ ಯುವ ರೆಡ್ಕ್ರಾಸ್ ಘಟಕ, ರೋವರ್ಸ್, ಎನ್ಸಿಸಿ, ಎನ್ಎಸ್ಎಸ್ ಘಟಕದಿಂದ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಸಂಗ್ರಹಿಸಿದ ರಕ್ತವನ್ನು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ಹಸ್ತಾಂತರ ಮಾಡಲಾಯಿತು. ಇದೇ ವೇಳೆ ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಿದರು.
ಶಿಬಿರಕ್ಕೆ ಚಾಲನೆ ನೀಡಿದ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ರಕ್ತದ ಕೊರತೆ ಇದೆ. ಆದ್ದರಿಂದ ಶಿಬಿರಗಳು ಹೆಚ್ಚೆಚ್ಚು ಆಯೋಜನೆಗೊಳ್ಳಬೇಕಿದೆ. ಅದೇ ರೀತಿ ರಕ್ತದಾನ ಮಾಡುವಂತಹ ಮನಸ್ಸುಗಳ ಅವಶ್ಯಕತೆ ಇದೆ. ಮಹಿಳೆಯರಲ್ಲಿ ರಕ್ತದ ಕೊರತೆ ಹೆಚ್ಚು ಕಾಡುತ್ತಿದ್ದು, ಅಗತ್ಯತೆಗೆ ತಕ್ಕಂತೆ ಪೂರೈಕೆ ಮಾಡುವುದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲ. ರಕ್ತಕ್ಕೆ ರಕ್ತವೇ ಪರ್ಯಾಯ ಔಷಧ. ಈ ನಿಟ್ಟಿನಲ್ಲಿ ಯುವ ಜನತೆ ರಕ್ತದಾನ ಮಾಡುವ ಮೂಲಕ ಶ್ರೇಷ್ಟತೆಯನ್ನು ಮೆರೆಯಬೇಕಿದೆ ಎಂದರು.
ಪ್ರಾಂಶುಪಾಲ ಡಾ.ಎಂ.ಮಂಜುನಾಥ್, ಜಗತ್ತಿನಲ್ಲಿ ರಕ್ತವನ್ನು ತಯಾರಿಸುವ ಯಾವುದೇ ಕಾರ್ಖಾನೆ ಇಲ್ಲ. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನಲ್ಲಿ ಪ್ರತಿ ವರ್ಷವೂ ರಕ್ತದಾನ ಅಭಿಯಾನ ನಡೆಸಲಾಗುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದೇವೆ ಎಂದರು.
ರೆಡ್ಕ್ರಾಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ನಿರ್ದೇಶಕ ಕೆ.ಟಿ.ಹನುಮಂತು, ಸಂಚಾಲಕ ಪ್ರೊ.ಜಯರಾಂ, ರೋವರ್ಸ್ ಮುಖ್ಯಸ್ಥ ಪ್ರೊ.ಎಸ್.ಕೆ.ವೀರೇಶ್, ಎನ್ಎಸ್ಎಸ್ ಮುಖ್ಯಸ್ಥ ಡಾ. ಶಿವಕುಮಾರ್, ಎನ್ಸಿಸಿ ಮುಖ್ಯಸ್ಥ ಪ್ರೊ.ರಮೇಶ್, ಉಪನ್ಯಾಸಕ ಜೋಗಿಗೌಡ ಇತರರಿದ್ದರು.