

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 160 ಯೂನಿಟ್ ರಕ್ತಸಂಗ್ರಹಿಸಲಾಯಿತು.
ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಮಿಮ್ಸ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಹಾಗೂ ಮಿಮ್ಸ್ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಮಾದರಿಯಾದರು.
ಶಿಬಿರಕ್ಕೆ ಚಾಲನೆ ನೀಡಿದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ರಾಜ್ಯದಲ್ಲಿಯೇ ರಕ್ತ ಪೂರೈಕೆಯಲ್ಲಿ ಮಂಡ್ಯ ಪ್ರಥಮ ಸ್ಥಾನದಲ್ಲಿ ನಿಲ್ಲಬೇಕು ಎನ್ನುವ ಸದುದ್ದೇಶದಿಂದ ಕಾರ್ಯ ರೂಪಿಸುತ್ತಿದ್ದೇವೆ. ರಕ್ತನಿಧಿ ಕೇಂದ್ರದ ಸಹಕಾರದೊಂದಿಗೆ ಸಾಕಷ್ಟು ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಯುವ ಜನರಲ್ಲಿ ಇರುವಂತಹ ಭಯವನ್ನು ಹೋಗಲಾಡಿಸಲು ಜಾಗೃತಿ ಮೂಡಿಸಲಾಗುತ್ತಿದೆ. ರಕ್ತದಾನ ಮಾಡಿದರೆ ತನ್ನ ಆರೋಗ್ಯಕ್ಕೆ ತೊಂದರೆಯಾಗುತ್ತವೆ ಎನ್ನುವ ತಪ್ಪು ಕಲ್ಪನೆಗಳನ್ನು ದೂರ ಮಾಡಿಸಲು ಮುಂದಾಗಿದ್ದೇವೆ. ಆರೋಗ್ಯ ರಕ್ಷಣೆಗಾಗಿ ರಕ್ತದಾನ ಮಾಡಿವುದು ಸೂಕ್ತ ಎನ್ನುವುದು ಬರಬೇಕಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲಾಸ್ಪತ್ರೆಯ ಒಳ ಮತ್ತು ಹೊರ ರೋಗಿಗಳ ತಪಾಸಣೆ ಕೇಂದ್ರಗಳಲ್ಲಿ ಸಾಕಷ್ಟು ಯುವಕರು ಹಾಗೂ ಯುವತಿಯರೇ ಅನಾರೋಗ್ಯದಿಂದ ಬಳಲಿ ಚಿಕಿತ್ಸೆಗೆ ಬರುತ್ತಿರುವುದು ಕಂಡುಬರುತ್ತಿದೆ. ಅವರಿಗೆ ರಕ್ತಕೊಡುವ ಅನಿವಾರ್ಯತೆ ಬರಬಹುದು ಎಂದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯಿಂದ ಬಹಳಷ್ಟು ಸೇವಾಕಾರ್ಯ, ಜಾಗೃತಿ ಅಭಿಯಾನ ಮಾಡುತ್ತಿದ್ದೇವೆ. ಬೆಳಗಾವಿ ಕಡೆ ಹೊದರೆ ಸ್ಪರ್ಧಾತ್ಮಕವಾಗಿ ರಕ್ತದಾನ ಶಿಬಿರಗಳನ್ನು ಮಾಡುತ್ತಿರುವುದು ಕಂಡುಬರುತ್ತಿದೆ. ಅದೇ ರೀತಿ ಜಿಲ್ಲೆಯಲ್ಲೂ ಸಾಧನೆ ಮಾಡಲು ಮುಂದಾಗೋಣ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ರಕ್ತದಾನ ಮಾಡಿದ ದಾನಿಗಳನ್ನು ಗುರುತಿಸಿ ಅಭಿನಂದಿಸಿ ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದರು.
ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ವಿದ್ಯಾರ್ಥಿಗಳ ಸಹಕಾರದಿಂದ ರಕ್ತದಾನ ಅಭಿಯಾನ ನಡೆಯುತ್ತಿದೆ. ಉತ್ತಮ ಸ್ಪಂದನೆ ಲಭ್ಯವಾಗಿದೆ. ಸಮಾಜಕ್ಕೆ ತುಂಬ ಅವಶ್ಯಕತೆ ಇರುವಂತಹದ್ದು ರಕ್ತದಾನ. ಈ ಮೂಲಕ ವಿದ್ಯಾರ್ಥಿಗಳು, ನಾಗರಿಕರು, ರಕ್ತದಾನ ಮಾಡಲು ಮುಂದಾಗಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ರಕ್ತದ ತುಂಬ ಅವಶ್ಯಕತೆ ಇದೆ. ಇದು ಕೃತಕವಾಗಿ ಲಭ್ಯವಾಗದು. ಮನುಷ್ಯನ ರಕ್ತವೇ ಮನುಷ್ಯನಿಗೆ ಔಷಧವಾಗುತ್ತಿದೆ ಎಂದು ತಿಳಿಸಿದರು.
ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಜಂಟಿ ಕಾರ್ಯದರ್ಶಿ ರಂಗಸ್ವಾಮಿ ಇತರರಿದ್ದರು.