

ಕೊಳ್ಳೇಗಾಲ: ಬಸವರಾಜೇಂದ್ರ ರಕ್ತ ನಿಧಿ, ನಿಸರ್ಗ ಕಾಲೇಜ್ ಆಫ್ ಮ್ಯಾನೇಂಜ್‌ಮೆಂಟ್ ವತಿಯಿಂದ ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಸಂಸ್ಥೆಯ ಕಾರ್ಯದರ್ಶಿ ಎಸ್.ದತ್ತೇಶ್ ಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಬಸವರಾಜೇಂದ್ರ ರಕ್ತ ನಿಧಿಯ ರೆಸಿಡೆಂಟ್ ಡಾ.ಮಂಜುನಾಥ್ ಮಾತನಾಡಿ, ರಕ್ತದಾನ ಉತ್ತಮವಾದ ಕೆಲಸವಾಗಿದೆ. ಇದು ದೇಹದ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ ಎಂದರು.
ಮಾಸನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ದತ್ತೇಶ್ ಕುಮಾರ್ ಮಾತನಾಡಿ, ರಕ್ತದಾನ ಮಾಡುವುದು ಜೀವ ಉಳಿಸುವ ಕೆಲಸವಾಗಿದೆ. ಅಲ್ಲದೆ ಹೊಸ ರಕ್ತ ದೇಹದಲ್ಲಿ ಉತ್ಪತ್ತಿಯಾಗಲಿದೆ. ದೇಹದ ಕೊಬ್ಬಿನಾಂಶವನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಸಮಸ್ಯೆಗಳು ಸಹ ಕಡಿಮೆ ಆಗುತ್ತದೆ. ರಕ್ತದಾನ ದೇಹದ ಆರೋಗ್ಯಕ್ಕೆ ಸಹಕಾರಿ ಎಂದರು.
ಈ ವೇಳೆ ಡಾ.ಎಸ್.ದತ್ತೇಶ್ ಕುಮಾರ್ ಹಾಗೂ 50 ವಿದ್ಯಾರ್ಥಿಗಳು ಸೇರಿದಂತೆ ಬೋಧಕ ಸಿಬ್ಬಂದಿ ರಕ್ತದಾನ ಮಾಡಿದರು. ಬಸವರಾಜೇಂದ್ರ ರಕ್ತ ನಿಧಿ ಆಡಳಿತಾಧಿಕಾರಿ ಎಚ್.ಕೆ ರಜಿನಿ, ಮಾನಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ನಾಗರಾಜು, ಪ್ರಾಂಶುಪಾಲ ಡಿ.ಧನಂಜಯ, ಡಿ.ಕೃಷ್ಣೇಗೌಡ, ಡಾ.ಎಂ.ಚೆನ್ನಶೆಟ್ಟಿ, ಮುಖ್ಯ ಶಿಕ್ಷಕ ಶಂಕರ್, ಗಿರಿಜಾಲಕ್ಷ್ಮೀ ಇದ್ದರು.