

ನರೇಗಲ್ಲ: ಅತ್ಯಂತ ಅವಶ್ಯಕ ಮತ್ತು ಅನಿವಾರ್ಯ ಸಂದರ್ಭದಲ್ಲಿ ರೋಗಿ ಜೀವ ಉಳಿಸಲು ರಕ್ತದ ಅವಶ್ಯಕತೆ ಇದ್ದೇ ಇದೆ. ಹೀಗೆ ರಕ್ತವನ್ನು ಒದಗಿಸುವಲ್ಲಿ ಬ್ಲಡ್ ಬ್ಯಾಂಕ್‌ಗಳು ಇನ್ನಿಲ್ಲದ ಸೇವೆ ಒದಗಿಸುತ್ತಿವೆ. ನಾವೂ ನಮಗೆ ಅವಕಾಶ ಸಿಕ್ಕಾಗಲೆಲ್ಲ ರಕ್ತದಾನ ಮಾಡಬೇಕು ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ತಿಳಿಸಿದರು. ಸ್ಥಳೀಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಹುಲಕೋಟಿಯ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯವರು ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಡಾ. ಸಂಜನಾ, ಸಂಚಾಲಕಿ ಬಿ.ಕೆ. ಸವಿತಕ್ಕ ಮಾತನಾಡಿದರು. 50 ಜನರು ರಕ್ತದಾನ ಮಾಡಿದರು. ಗದಗ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ರೇಖಾ, ಬಿ.ಕೆ. ಜೊಸ್ನ್ನಾ, ಪ್ರಯೋಗಾಲಯ ತಂತ್ರಜ್ಞ ವೆಂಕಟೇಶ, ಇತರರಿದ್ದರು.