

ಮಂಡ್ಯ: ರಕ್ತದಾನ ಮಾಡುವಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಮಿಮ್ಸ್ ಪ್ರಾಂಶುಪಾಲ ಡಾ.ಪಿ.ಎಸ್.ತಮ್ಮಣ್ಣ ಹೇಳಿದರು.
ನಗರದ ಜ್ಞಾನಸಾಗರ ಕ್ಯಾಂಪಸ್‌ನಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಮೈಸೂರಿನ ಮೇಧ ಎಜುಕೇಷನ್ ಫರ್ಮ್, ಕೃಷಿಕ್ ಲಯನ್ಸ್ ಸಂಸ್ಥೆ, ಮಾಂಡವ್ಯ ನಗರ ಲಯನ್ಸ್ ಸಂಸ್ಥೆ, ಮಂಡ್ಯ ಸೆಂಟ್ರಲ್ ಲಯನ್ಸ್ ಸಂಸ್ಥೆ, ರಕ್ತ ನಿಧಿ ಕೇಂದ್ರ, ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ಮತ್ತು ಮಾಂಡವ್ಯ ಬಿಇಡಿ ಕಾಲೇಜು ಸಹಯೋಗದಲ್ಲಿ ವಿಶ್ವ ಹೃದಯ ದಿನ, ವಿಶ್ವ ಪ್ರಥಮ ಚಿಕಿತ್ಸಾ ದಿನ, ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನದ ಅಂಗವಾಗಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅಪಘಾತದ ಸಂದರ್ಭದಲ್ಲಿ ಚಿಕಿತ್ಸೆಗೆ ದಾಖಲಾಗುವ ರೋಗಿಗಳಿಗೆ ತುರ್ತಾಗಿ ರಕ್ತ ಬೇಕಿರುತ್ತದೆ. ಆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿರುವುದರಿಂದ ಅದನ್ನು ಕ್ರೂಢೀಕರಿಸಲು ಶಿಬಿರ ಹೆಚ್ಚಾಗಿ ನಡೆಯಬೇಕು. ಆರೋಗ್ಯವಂತ ಯುವಕ ಯುವತಿಯರು ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಜಿ.ಮಾದೇಗೌಡ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕಿ ಡಾ.ಎಸ್.ಹೇಮಾ ಮಾತನಾಡಿ, ಭಾರತದಲ್ಲಿ ಹೃದಯ ರೋಗ ಹೆಚ್ಚುತ್ತಿದೆ. ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಬೇಕು. ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಹೃದಯ ಕಾಳಜಿ ವಹಿಸುವುದು ಮುಖ್ಯವಾಗಬೇಕು. ಹೃದಯಾಘಾತ ನಡೆಯುವ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆಯೂ ಎಲ್ಲರಿಗೂ ಅರಿವಿರಬೇಕು ಎಂದು ತಿಳಿಸಿದರು.
ರಕ್ತದಾನಕ್ಕೆ ಚಾಲನೆ ನೀಡಿದ ಎಸ್.ಬಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಲವು ಜನರು ಹೃದಯ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ. ನುರಿತ ತಜ್ಞರಿಂದ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಆ ಮೂಲಕ ಈ ರೋಗವನ್ನು ತಡೆಗಟ್ಟಬಹುದು ಎಂದರು.
ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ನಿವೃತ್ತ ಪ್ರಾಂಶುಪಾಲ ಶಿವಕುಮಾರ್, ಕೃಷಿಕ್ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು, ಮಂಡ್ಯ ನಗರ ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಬಿ.ಎಸ್.ಶಿವಕುಮಾರ್, ಮಂಡ್ಯ ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷ ಚೇತನ್‌ಕೃಷ್ಣ, ಅಪೊಲೋ ಆಸ್ಪತ್ರೆಯ ಡಾ.ಜೆ.ವೀನು, ಡಾ.ಡಿ.ಶಶಿರೇಖಾ, ಪ್ರಾಂಶುಪಾಲರಾದ ಸುಮಾರಾಣಿ ಶಂಭು, ಭವಾನಿ ಶಂಕರ್ ಇತರರಿದ್ದರು. ಇದೇ ವೇಳೆ 25ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.