

ಮಂಡ್ಯ: ಇಲ್ಲಿನ ಅಶೋಕನಗರದ ಫೆಡರಲ್ ಬ್ಯಾಂಕಿನ ಆವರಣದಲ್ಲಿ ಬ್ಲಡ್ ಬ್ಯಾಂಕ್, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್), ಜೀವಧಾರೆ ಟ್ರಸ್ಟ್ ಸಹಯೋಗದಲ್ಲಿ ರಕ್ತದಾನ ಅಭಿಯಾನ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೀವಧಾರೆ ಟ್ರಸ್ಟ್ ಅಧ್ಯಕ್ಷ ಎಸ್.ಎಂ.ನಟರಾಜು, ಜನಪ್ರಿಯ ಮುಖ್ಯಮಂತ್ರಿ ಡಿ.ದೇವರಾಜು ಅರಸು ಅವರ ಜನ್ಮದಿನದಂದು ರಕ್ತದಾನ ಶಿಬಿರ ಆಯೋಜನೆ ಮಾಡಿರುವುದು ಸಂತಸ ತಂದಿದೆ. ಬ್ಯಾಂಕಿನವರು ಕೇವಲ ಹಣ ವಹಿವಾಟು ನಡೆಸಲಷ್ಟೇ ಸೀಮಿತವಲ್ಲ, ಅಮೂಲ್ಯ ಜೀವ ಉಳಿಸುವ ನಿಟ್ಟಿನಲ್ಲಿ ರಕ್ತದಾನ ಮಾಡುವ ಮೂಲಕ ಇತರೆ ಬ್ಯಾಂಕಿಗಳಿಗೆ ಪ್ರೇರಣೆಯಾಗಿದ್ದಾರೆ ಎಂದು ಶ್ಲಾಘಿಸಿದರು.
ಫೆಡರಲ್ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಬಿ.ಆರ್.ವರುಣ್ ಮಾತನಾಡಿ, ನಮ್ಮ ಬ್ಯಾಂಕಿನ ವತಿಯಿಂದ ರಕ್ತ ಸಂಗ್ರಹಿಸುವ ಕೆಲಸಕ್ಕೆ ತಮ್ಮೆಲ್ಲರ ಸಹಕಾರ ಮುಖ್ಯವಾಗಿದೆ. ಹಾಗಾಗಿದಾನಿಗಳು ಬಂದು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ ಮುಂದುವರೆಯಲಿದೆ ಎಂದರು.
ರಕ್ತನಿಧಿ ಕೇಂದ್ರದ ಮುಖ್ಯ ಅಧಿಕಾರಿ ಡಾ.ಜೆ.ಗಾಯತ್ರಿ ಮಾತನಾಡಿ, ಆಸ್ಪತ್ರೆಗೆ ಬರುವ ಬಹುತೇಕ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. ರಕ್ತದಾನ ಮಹಾದಾನವಾಗಿದೆ. ಅದನ್ನು ಅರಿತು ಹಲವು ಸಂಘಸಂಸ್ಥೆಗಳು ರಕ್ತದಾನ ಆಯೋಜನೆ ಮಾಡುವ ಮೂಲಕ ಬೆಂಬಲ ನೀಡುತ್ತಿದ್ದಾರೆ. ಔಷಧ ಸಿಗುವ ಹಾಗೆ ನಮಗೆ ತುರ್ತಾಗಿ ರಕ್ತ ಬೇಕೆಂದಾಗ ಸಿಗುವುದಿಲ್ಲ. ಆ ಕೊರತೆಯನ್ನು ನೀಗಿಸಲು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಜೀವ ಉಳಿಸಿ ಎಂದು ಮನವಿ ಮಾಡಿದರು.
ಬ್ಯಾಂಕಿನ ಭಾಗ್ಯಮ್ಮ ಉಮ್ಮಡಹಳ್ಳಿ, ಸುಮಂತ್, ವರ್ಷಿತಾ, ಮಹದೇವಪ್ರಸಾದ್, ಬಿಂದು, ದರ್ಶನ್, ಬಸವ ಇತರರಿದ್ದರು. ರಕ್ತದಾನ ಅಭಿಯಾನದಲ್ಲಿ 50ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.