ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಕ್ತದಾನ ಶಿಬಿರ

19
Published on

ನಗರದ ಬನ್ನೂರು ರಸ್ತೆಯ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನ ಎನ್.ಎಸ್.ಎಸ್. ಘಟಕ ಹಾಗೂ ರೋಟರಿ ಮೈಸೂರು ಸಂಸ್ಥೆಯ ಸಹಯೋಗದಲ್ಲಿ ಶುಕ್ರವಾರ ರಕ್ತದಾನ ಶಿಬಿರ ನೆರವೇರಿತು.

77ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಪ್ರಾಂಶುಪಾಲ ಡಾ.ಎ.ಕೆ.ಮೂರ್ತಿ ಹಾಗೂ ರೋಟರಿ ಸಂಸ್ಥೆಯ ಅಧ್ಯಕ್ಷ ಅರುಣ್ ಆರ್.ಬೆಳವಾಡಿ ಇತರೆ ಪದಾಧಿಕಾರಿಗಳೊಂದಿಗೆ ಉದ್ಘಾಟಿಸಿದರು.

ಡಾ.ಎ.ಕೆ.ಮೂರ್ತಿ ಮಾತನಾಡಿ, ರಕ್ತದಾನವೆಂಬುದು ಅತ್ಯಂತ ಶ್ರೇಷ್ಠದಾನವಾಗಿದೆ. ಅನ್ನದಾನಕ್ಕಿರುವಷ್ಠೆ ಮಹತ್ವ ರಕ್ತದಾನಕ್ಕಿದೆ. ನಾವು ನೀಡುವ ಸ್ವಲ್ಪ ಪ್ರಮಾಣದ ರಕ್ತದಿಂದ ಅಮೂಲ್ಯವಾದ ಜೀವಗಳನ್ನು ಕಾಪಾಡಬಹುದು. ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ತೊಂದರೆಯಾಗುತ್ತದೆ ಎನ್ನುವುದು ತಪ್ಪು ಕಲ್ಪನೆ, ನಾವು ನೀಡಿದ ರಕ್ತ ನಮ್ಮ ದೇಹದಲ್ಲಿ 20 ರಿಂದ 30 ದಿನಗಳಲ್ಲಿ ಮರು ಉತ್ಪಾದನೆಯಾಗುತ್ತದೆ ಎಂದರು.

ಅರುಣ್ ಆರ್.ಬೆಳವಾಡಿ ಮಾತನಾಡಿ, ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ವಿಶೇಷವಾಗಿ ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆಗಳ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಆದ್ದರಿಂದ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲದವರು ನಿಯಮಿತವಾಗಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದು ಒಳ್ಳೆಯದು ಎಂದರು .

ಕಾಲೇಜಿನ ನೂರಾರು ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಶಿಬಿರದ ಸಂಯೋಜಕ, ಎನ್.ಎಸ್.ಎಸ್. ಘಟಕದ ಮುಖ್ಯಸ್ಥ ಡಾ.ಎಲ್.ಯತೀಶ, ಆಡಳಿತಾಧಿಕಾರಿ ಡಾ.ಸಚ್ಚಿದಾನಂದಮೂರ್ತಿ, ಡೀನ್‌ಗಳಾದ ಡಾ.ಎಂ.ಎಸ್.ಗೋವಿಂದೇಗೌಡ, ಡಾ.ಭಾಗ್ಯಶ್ರೀ, ರೊಟರಿ ಸಂಸ್ಥೆಯ ಪದಾಧಿಕಾರಿಗಳಾದ ಬಿ.ಎಸ್.ರವಿಕುಮಾರ್, ಸಮೀರ್ ಕಶ್ಯಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net