

ಹುಬ್ಬಳ್ಳಿ: ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಜೂನ್ 14ರಂದು ಬೆಳಗ್ಗೆ 8ಕ್ಕೆ ನಗರದಲ್ಲಿ ಶಾ ದಾಮಜಿ ಜಾದವಜಿ ಛೇಡಾ ಸ್ಮಾರಕ ರಾಷ್ಟ್ರೋತ್ಥಾನ ರಕ್ತಕೇಂದ್ರದ ವತಿಯಿಂದ ರಕ್ತದಾನ ಶಿಬಿರ ಹಾಗೂ ಜಾಗೃತಿ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕೇಂದ್ರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ನೀಲಿಜಿನ್ ರಸ್ತೆಯಲ್ಲಿರುವ ರಕ್ತಕೇಂದ್ರದ ಬಳಿ ಮನಗುಂಡಿಯ ಶ್ರೀ ಬಸವಾನಂದ ಸ್ವಾಮೀಜಿ ನಡಿಗೆಗೆ ಚಾಲನೆ ನೀಡುವರು. ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಆರ್ ಟಿಒ ಅಧಿಕಾರಿ ಎಸ್.ಡಿ. ಬೆಲ್ಲದ, ಉದ್ಯಮಿಗಳಾದ ಡಾ. ವಿ.ಎಸ್.ವಿ. ಪ್ರಸಾದ, ನಂದಕುಮಾರ್ ಇತರರು ಪಾಲ್ಗೊಳ್ಳುವರು.
ನೀಲಿಜಿನ್ ರಸ್ತೆ, ಕೋರ್ಟ್ ಸರ್ಕಲ್, ಲ್ಯಾಮಿಂಗ್ಟನ್ ರಸ್ತೆ, ಚನ್ನಮ್ಮ ವೃತ್ತ, ಹಳೇ ಬಸ್ ನಿಲ್ದಾಣ, ನ್ಯೂ ಕಾಟನ್ ಮಾರ್ಕೇಟ್ ಮೂಲಕ ವಾಪಸ್ ರಕ್ತಕೇಂದ್ರಕ್ಕೆ ನಡಿಗೆ ತಲುಪಲಿದೆ. ವಿವಿಧ ಶಾಲೆ, ಕಾಲೇಜುಗಳ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಸಾರ್ವಜನಿಕರು ನಡಿಗೆಯಲ್ಲಿ ಪಾಲ್ಗೊಳ್ಳುವರು.
18 ವರ್ಷ ಮೇಲ್ಪಟ್ಟ ಹಾಗೂ 65 ವರ್ಷ ಒಳಗಿನ ಎಲ್ಲ ಆರೋಗ್ಯವಂತ ಪುರುಷ, ಮಹಿಳೆಯರು ರಕ್ತದಾನ ಮಾಡಬಹುದು. ಇದರ ಬಗ್ಗೆ ಯಾರಿಗೂ ಭಯ ಬೇಡ ಎಂದು ಅರಿವು ಮೂಡಿಸುವ ಕೆಲಸ ಆಗಲಿದೆ ಎಂದರು.
ರಕ್ತ ಕೇಂದ್ರದಿಂದ ಹೊಸದಾಗಿ ರಕ್ತದೂತ ಸೇವಾ ಕೇಂದ್ರ ಆರಂಭಿಸಲಾಗಿದೆ. ನಗರದ ಯಾವುದೇ ಆಸ್ಪತ್ರೆಯಲ್ಲಿ ರೋಗಿಗೆ ರಕ್ತ ಅಗತ್ಯವಾಗಿ ಬೇಕಾದರೆ ಸಿಬ್ಬಂದಿ ಅಲ್ಲಿಗೆ ಹೋಗಿ ಸ್ಯಾಂಪಲ್ ಪಡೆದು ಹೊಂದಾಣಿಕೆಯಾಗುವ ರಕ್ತವನ್ನು ಅಲ್ಲಿಗೇ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಡಾ. ಎಸ್.ಎಸ್. ಸಂಗೊಳ್ಳಿ, ವಿನೋದ ಪಟ್ವಾ, ಹರೀಶ ಜೋಶಿ, ಇತರರು ಗೋಷ್ಠಿಯಲ್ಲಿದ್ದರು.