

ಹುಬ್ಬಳ್ಳಿ: ರಕ್ತದಾನ ಮಾಡುವುದರಿಂದ ನಾವು ಇನ್ನೊಬ್ಬರ ಜೀವ ಉಳಿಸಬಹುದು. ಅಲ್ಲದೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಹೇಳಿದರು.
ವಿಶ್ವ ರಕ್ತದಾನಿಗಳ ದಿನದ ನಿಮಿತ್ತ ಷಾ ಧಾಮಜಿ ಜಾಧವಜಿ ಛೇಡಾ ಮೆಮೋರಿಯಲ್ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ವತಿಯಿಂದ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಜಾಗೃತಿಗಾಗಿ ನಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಕ್ತದಾನ ಮಾಡಿದರೆ ಒಂದು ವಾರ ವ್ಯಾಯಾಮ ಮಾಡಿದಕ್ಕೆ ಸಮ. ರಕ್ತದಾನ ಮಾಡುವುದರಿಂದ ಆರೋಗ್ಯ ಮತ್ತಷ್ಟು ವೃದ್ಧಿಯಾಗುತ್ತದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ವಿದ್ಯಾರ್ಥಿಗಳೇ ನಿಮ್ಮ ಜನ್ಮದಿನದ ಸಂದರ್ಭದಲ್ಲಿ ನೀವು, ನಿಮ್ಮ ಮಿತ್ರರು ಸೇರಿ ಇದೇ ರಾಷ್ಟ್ರೋತ್ಥಾನದಲ್ಲಿ ರಕ್ತದಾನ ಮಾಡಬೇಕು. ಈ ಮೂಲಕ ಇತರರಿಗೆ ಪ್ರೇರಣೆಯಾಗಬೇಕು ಎಂದರು.
ಸ್ವರ್ಣ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ.ವಿ.ಎಸ್.ವಿ. ಪ್ರಸಾದ, ಅಸಿಸ್ಟಂಟ್ ಡ್ರಗ್ ಕಂಟ್ರೋಲರ್ ರಘುರಾಮ, ಉದ್ಯಮಿಗಳಾದ ಎಚ್.ಎನ್. ನಂದಕುಮಾರ, ಗೋವಿಂದ ಜೋಶಿ, ದಾನಿ ವೀರೇಂದ್ರ ಛೇಡಾ, ರಕ್ತ ನಿಧಿ ಕೇಂದ್ರ ಆಡಳಿತಾಧಿಕಾರಿ ದತ್ತಮೂರ್ತಿ ಕುಲಕರ್ಣಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ರವಿ ನಾಯಕ್, ವಿವಿಧ ಕಾಲೇಜ್ಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಕ್ತ ಕೇಂದ್ರದಿಂದ ಆರಂಭವಾಗುವ ಜಾಗೃತಿಗಾಗಿ ನಡಿಗೆಯು ನೀಲಿಜಿನ್ ರಸ್ತೆ, ಹಳೇ ಕೊರ್ಟ್ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಚನ್ನಮ್ಮ ವೃತ್ತ, ಹಳೇ ಬಸ್ ನಿಲ್ದಾಣ, ನ್ಯೂ ಕಾಟನ್ ಮಾರ್ಕೆಟ್ ಮಾರ್ಗವಾಗಿ ತೆರಳಿ ಮರಳಿ ರಕ್ತ ಕೇಂದ್ರ ತಲುಪಿತು.