

ಕೊಳ್ಳೇಗಾಲ : ಸಾಮಾಜಿಕ ಅಸಮಾನತೆ ಹೋಗಲಾಡಿಸಲು ರಕ್ತದಾನ ಶಿಬಿರ ಒಂದು ಪ್ರಮುಖ ಮಾರ್ಗ ಎಂದು ಆರ್ಯ ವೈಶ್ಯ ಸಮಾಜದ ತಾಲೂಕು ಅಧ್ಯಕ್ಷ ಎ.ಡಿ ಕುಮಾರ ಕೃಷ್ಣ ಹೇಳಿದರು. ಪಟ್ಟಣದ ವಾಸವಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸೋಮವಾರ ಸರ್ಕಾರಿ ಉಪವಿಭಾಗ ಆಸ್ಪತ್ರೆ, ಲಯನ್ಸ್ ಕ್ಲಬ್, ವಾಸವಿ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ರಕ್ತದಾನ ಶಿಬಿರದಿಂದ ಹಲವು ಪ್ರಯೋಜನಗಳಿವೆ. ಇಂದು ಧರ್ಮ ಹಾಗೂ ಜಾತಿಗಳ ನಡುವಿನ ವಿಚಾರ, ಹೊಡೆದಾಟ, ಬಡಿದಾಟ ಇವೆಲ್ಲ ಹೆಚ್ಚಾಗಿವೆ. ರಕ್ತದಾನ ಶಿಬಿರದಿಂದ ಇವೆಲ್ಲವನ್ನೂ ಹೋಗಲಾಡಿಸಬಹುದಾಗಿದೆ. ದಾನಿಗಳಿಂದ ಶೇಖರಿಸಿದ ರಕ್ತವನ್ನು ಮತ್ತೊಬ್ಬರಿಗೆ ನೀಡಲಾಗುತ್ತದೆ. ರಕ್ತ ಪಡೆಯುವವರಿಗೆ ಆ ಸಮಯ ಕ್ಕೆ ಜೀವ ಉಳಿದರೆ ಸಾಕು ಎಂಬ ಸನ್ನಿವೇಶ ಇರುತ್ತದೆ. ಹಾಗೆ, ಜೀವಕ್ಕಿಂತ ಬೇರೆಯಾವುದು ದೊಡದ್ದಲ್ಲ ಎಂದರು. ರಕ್ತ ನೀಡಿದರೆ ನಿಶಕ್ತಿಗೊಳಗಾಗುತ್ತಾರೆ ಎಂಬ ಅವೈಜ್ಞಾನಿಕ ಮನಸ್ಥಿತಿ ಎಲ್ಲರಲ್ಲೂ ಇದೆ. ಈ ಬಗ್ಗೆ ಜಾಗೃತಿ ಆಗಬೇಕು. ರಕ್ತದಾನ ಜೀವ ಉಳಿಸುವ ಕಾರ್ಯ ಎಂದು ಎಲ್ಲರಿಗೂ ತಿಳಿಯಬೇಕು ಎಂದು ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ್ ಬಾಬು, ರಕ್ತದಾನ ಶ್ರೇಷ್ಠವಾದದ್ದು. ಇದ್ದರಿಂದ ಜೀವ ಉಳಿಸಿದ ಪುಣ್ಯ ದಾನಿಗಳಿಗೆ ಸಿಗುತ್ತದೆ. ಇಂತಹ ಶಿಬಿರಗಳು ಹೆಚ್ಚು ಆಗಬೇಕು ಎಂದರು. ಚಾಮರಾಜನಗರ ಸಿಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆದರ್ಶ್ ಮಾತನಾಡಿ, ಈ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬಳಸಿ ಎಲ್ಲವನ್ನೂ ತಯಾರಿಸಬಹುದು. ಅದರೆ, ರಕ್ತವನ್ನು ಮಾತ್ರ ತಯಾರಿಸಲು ಸಾಧ್ಯವಿಲ್ಲ. ಅದು ಮಾನವನಿಂದ ಮಾತ್ರ ಸಾಧ್ಯ. ಅದಕ್ಕೆ ನಾವೆಲ್ಲರೂ ಮತ್ತೊಬ್ಬರ ಜೀವ ಉಳಿಸುವ ಕೆಲಸಕ್ಕೆ ಮುಂದಾಗಬೇಕು ಎಂದರು.