ರಕ್ತದಾನ ಮಾಡಿ ಮಾನವೀಯತೆ ಮೆರೆಯಿರಿ: ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಸಲಹೆ

1 (9)
Published on

ಮಂಡ್ಯ: ಇಂದಿನ ಯುವಸಮೂಹ ಹಾಗೂ ಆರೋಗ್ಯವಂತರು ರಕ್ತದಾನ ಮಾಡಿ ಜೀವ ಉಳಿಸುವ ನಿಟ್ಟಿನಲ್ಲಿ ಮಾನವೀಯತೆ ಮೆರೆಯಬೇಕಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಸಲಹೆ ನೀಡಿದರು.

ನಗರದ ಹೊರವಲಯದ ಮಾಂಡವ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದಿಂದ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಕ್ತದಾನ ಮಾಡುವುದರಿಂದ ಅನೇಕ ರೋಗಗಳಿಂದ ಮುಕ್ತರಾಗಬಹುದು. ಪ್ರಮುಖವಾಗಿ ಜೀವ ಉಳಿಸಿದ ತೃಪ್ತಿ ರಕ್ತದಾನಿಗಳದ್ದಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಯುವಮನಸ್ಸುಗಳು ರಕ್ತದಾನ ಮಾಡುವ ಮನೋಭಾವ ಹೆಚ್ಚಿಸಿಕೊಳ್ಳಬೇಕಿದೆ ಎಂದು ಕಿವಿಮಾತೇಳಿದರು.

ರಕ್ತಕ್ಕೆ ರಕ್ತವೇ ಔಷಧ. ಪರ್ಯಾಯ ವಸ್ತು ಸಂಶೋಧನೆಯಾಗದ ಕಾರಣ ರಕ್ತದಾನದ ಮೂಲಕ ರಕ್ತವನ್ನು ಸಂಗ್ರಹಿಸಿ ಅಗತ್ಯ ಉಳ್ಳವರಿಗೆ ರಕ್ತ ನೀಡುವ ಕಾರ್ಯ ಸಾಗುತ್ತಿದೆ. ಪ್ರತಿ ವರ್ಷ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಸಪ್ತಾಹವನ್ನು ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ನಡೆಸುತ್ತಾ ಬಂದಿದೆ. ಜೂ.7ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮವು ಅಂಬೇಡ್ಕರ್ ಭವನದಲ್ಲಿ ನಡೆದಾಗ ಅಲ್ಲಿ ಮೊದಲ ರಕ್ತದಾನ ಸಪ್ತಾಹ ಆರಂಭಗೊಂಡಿತು. ಅಂದು ಸುಮಾರು 200 ಯೂನಿಟ್ ರಕ್ತ ಸಂಗ್ರಹವಾಯಿತು ಎಂದರು.

ಮಂಡ್ಯದಲ್ಲಿ ರಕ್ತದ ಕೊರತೆ ಬಹಳಷ್ಟಿದೆ. ಪ್ರತಿದಿನ ರಕ್ತದ ಬೇಡಿಕೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿಬಿರದ ಮೂಲಕ ರಕ್ತಸಂಗ್ರಹಿಸಿ ಅದನ್ನು ಸರ್ಕಾರಿ ಆಸ್ಪತ್ರೆ ರಕ್ತನಿಧಿಕೇಂದ್ರಕ್ಕೆ ಕೊಡಲಾಗುತ್ತದೆ. ಅಂತೆಯೇ ಸಂಗ್ರಹಿಸಿಟ್ಟುಕೊಂಡು ಅನೇಕ ರೋಗಿಗಳಿಗೆ, ಗರ್ಭಿಣಿ, ಅಪಘಾತಕ್ಕೀಡದ ಜೀವಗಳನ್ನು ಉಳಿಸು ಕಾರ್ಯಕ್ಕೆ ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾಂಡವ್ಯ ಪದವಿ ಕಾಲೇಜಿನಲ್ಲಿ ಸಪ್ತಾಹ ಆಯೋಜಿಸಿದ್ದೇವೆ ಎಂದರು.

ಪ್ರಾಂಶುಪಾಲ ಪ್ರೊ.ಭವಾನಿಶಂಕರ್ ಮಾತನಾಡಿ, ಜೂ.14ರಂದು ವಿಶ್ವ ರಕ್ತದಾನಿಗಳ ದಿನ ಪ್ರಯುಕ್ತ ರಕ್ತದಾನ ಸಪ್ತಾಹ ನಡೆಯುತ್ತಿದೆ. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕವು ಜೂ.7ರಿಂದ ವಿವಿಧ ಕಾಲೇಜುಗಳಲ್ಲಿ ರಕ್ತದಾನ ಸಪ್ತಾಹ ಮೂಲಕ ರಕ್ತ ಸಂಗ್ರಹ ಅಭಿಯಾನ ನಡೆಸುತ್ತಿದೆ, ಮಿಮ್ಸ್ ರಕ್ತನಿಧಿಕೇಂದ್ರದ ಸಹಕಾರದೊಂದಿಗೆ ನಮ್ಮ ಮಾಂಡವ್ಯ ಪ್ರಥಮ ದರ್ಜೆ ಕಾಲೇಜಿನಲ್ಲೂ ಸಪ್ತಾಹದ ಮೂಲಕ ರಕ್ತಸಂಗ್ರಹ ಸುಕಾರ್ಯವನ್ನು ನಡೆಸುತ್ತಿದೆ. ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಸುಮಾರು 30 ರಿಂದ 40 ಯೂನಿಟ್ ರಕ್ತಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಜಂಟಿಕಾರ್ಯದರ್ಶಿ ರಂಗಸ್ವಾಮಿ, ಶೈಕ್ಷಣಿಕ ಪಾಲುದಾರ ಮಹೇಶ್, ಮುಖ್ಯಶಿಕ್ಷಕ ರಾಜಣ್ಣ, ರಕ್ತನಿಧಿ ಕೇಂದ್ರದ ಡಾ.ಕಣ್ಮಣಿ, ಜ್ಞಾನರಾಜ್, ಧನಂಜಯ, ರಾಜು ಇತರರಿದ್ದರು. ಇದೇ ಸಂದರ್ಭದಲ್ಲಿ ರಕ್ತದಾನ ಮಾಡಿದವರಿಗೆ ರಕ್ತನಿಧಿಕೇಂದ್ರದಿಂದ ಪ್ರಮಾಣಪತ್ರಗಳನ್ನು ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net