ರಕ್ತದಾನ ಮಾಡುವುದು ಅತ್ಯುತ್ತಮ ಕ್ರಾಂತಿ: ಮಂಡ್ಯ ವಿವಿ ಕುಲಪತಿ ಡಾ.ಪುಟ್ಟರಾಜು ಹೇಳಿಕೆ

22_11_Mdy_03(Blood Camp)
Published on

ಮಂಡ್ಯ: ವಿದ್ಯೆ ಕೊಟ್ಟಾಗ ಜೀವನ ಮಾಡಬಹುದು. ಅನ್ನ ಕೊಟ್ಟಾಗ ಹೊಟ್ಟೆ ತುಂಬುತ್ತದೆ. ರಕ್ತ ಕೊಟ್ಟಾಗ ಮಾತ್ರ ಜೀವ ಉಳಿಯಲು ಸಾಧ್ಯ ಎಂದು ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಪುಟ್ಟರಾಜು ಹೇಳಿದರು.
ನಗರದ ಮಂಡ್ಯ ವಿವಿ ಕೊಠಡಿಯಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ವಿವಿಯ ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ಘಟಕಗಳು, ರಕ್ತನಿಧಿಕೇಂದ್ರ ಮಿಮ್ಸ್, ಕೃಷಿಕ ಲಯನ್ಸ್ ಸಂಸ್ಥೆ, ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಕೊಪ್ಪ, ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಂಡ್ಯ ವಿವಿಯಲ್ಲಿ ಪ್ರತಿ ವರ್ಷ ರಕ್ತದಾನ ಸೇವಾ ಕಾರ್ಯ ಆಯೋಜಿಸಲಾಗುತ್ತಿದೆ. ಅತ್ಯುತ್ತಮ ಕ್ರಾಂತಿ ಎಂದರೆ ಅದು ರಕ್ತದಾನ ಮಾಡಿ ಜೀವ ಉಳಿಸುವುದು. ಅನ್ನದಾನ, ವಿದ್ಯಾದಾನ ಎಷ್ಟು ಮುಖ್ಯವೋ ರಕ್ತದಾನ ಕೂಡ ಅಷ್ಟೇ ಮುಖ್ಯ ಎಂದರು.
ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಯುವ ಸಮುದಾಯಕ್ಕೆ ಅಂತಃಕರಣ ಬಂದಾಗ ಮಾತ್ರ ರಕ್ತದಾನ ಸೇವಾ ಕಾರ್ಯಗಳು ಸಾಗಲು ಸಾಧ್ಯ. ವಿದ್ಯಾರ್ಥಿಗಳು ಸಮಾಜ ಸೇವೆಗಳಲ್ಲಿ ನಿರತರಾಗಬೇಕು. ಇದರಿಂದ ಇನ್ನೊಬ್ಬರಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದರು.
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮೈಸೂರು ವಿಭಾಗೀಯ ವ್ಯವಸ್ಥಾಪಕ ಪಿ.ಸಿ.ಸುಧೀರ್, ಎನ್‌ಎಸ್‌ಎಸ್ ಅಧಿಕಾರಿ ಡಾ.ಎಚ್.ಟಿ.ಆನಂದ್, ಎನ್‌ಸಿಸಿ ಕಮಾಂಡೊ ಡಾ.ಎ.ಎಲ್.ಸುರೇಶ್, ಡಾ.ಅತಿಥಿ, ಮಹಮದ್ ರಫಿ, ರಂಗಸ್ವಾಮಿ, ಶಿವಲಿಂಗಯ್ಯ ಇತರರಿದ್ದರು. ಇದೇ ವೇಳೆ 108 ಯೂನಿಟ್ ರಕ್ತ ಸಂಗ್ರಹವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net