ಅ.2ರಂದು ಮದ್ದೂರಲ್ಲಿ ಬೃಹತ್ ರಕ್ತದಾನ ಶಿಬಿರ: ಮಹತ್ವದ ಕಾರ್ಯಕ್ಕೆ ಕೈ ಜೋಡಿಸುವಂತೆ ಆಯೋಜಕರ ಮನವಿ

Camp
Published on

ಮದ್ದೂರು: ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ, 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಶಿವಪುರದ ಧ್ವಜಸತ್ಯಾಗ್ರಹ ಸೌಧದ ಆವರಣದಲ್ಲಿ ಅ.2ರಂದು ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಸಿರಿ ಆದರ್ಶ ಚಿಟ್ಸ್ ಫಂಡ್‌ನ ವ್ಯವಸ್ಥಾಪಕ ಆದರ್ಶ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನ ಸಂಘ ಸಂಸ್ಥೆಗಳ ಒಕ್ಕೂಟ ಮತ್ತು ಮಿಮ್ಸ್‌ನ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ರವರೆಗೆ ಶಿಬಿರ ನಡೆಯಲಿದೆ. ಯುವಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಬೇಕು ಎಂದು ಮನವಿ ಮಾಡಿದರು.

ಪ್ರಸ್ತುತ ಆಸ್ಪತ್ರೆಗಳಲ್ಲಿ ಹೆಚ್ಚಿನ ಪ್ರಮಾಣದ ರಕ್ತದ ಅವಶ್ಯಕತೆ ಇದೆ. ಅಪಘಾತಕ್ಕೀಡಾದವರು, ಗರ್ಭಿಣಿಯರು ಹಾಗೂ ಹಲವು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ರಕ್ತ ಅವಶ್ಯಕತೆ ಇರುವುದರಿಂದ ಆರೋಗ್ಯವಂತ ಪ್ರತಿಯೊಬ್ಬರು ರಕ್ತದಾನ ಮಾಡಬೇಕು. ಇದನ್ನು ಕರ್ತವ್ಯವೆಂದು ಭಾವಿಸಬೇಕು. ರಕ್ತದಾನ ಮಾಡುವುದರಿಂದ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ. ರಕ್ತದಾನ ಮಾಡುವುದರಿಂದ ಇನ್ನಷ್ಟು ಆರೋಗ್ಯ ವೃದ್ಧಿಸುವುದರ ಜತೆಗೆ ಮತ್ತೊಬ್ಬರ ಜೀವಕ್ಕೆ ಆಸರೆಯಾಗಬಹುದು. ಆದ್ದರಿಂದ ಸ್ವಯಂ ಪ್ರೇರಿತವಾಗಿ ಶಿಬಿರದಲ್ಲಿ ಭಾಗವಹಿಸಿ ಅತಿ ಹೆಚ್ಚಿನ ಪ್ರಮಾಣದ ರಕ್ತ ಸಂಗ್ರಹಕ್ಕೆ ಸಹಕರಿಸಬೇಕು ಎಂದರು.

ಮುಖಂಡರಾದ ಜಯಂತ್, ತೊರೆಚಾಕನಹಳ್ಳಿ ಶಂಕರೇಗೌಡ, ತೈಲೂರು ಸಿದ್ದರಾಜು, ರಘು ವೆಂಕಟೇಗೌಡ, ಕುಂದನಕುಪ್ಪೆ ಕುಮಾರ್, ತೈಲೂರು ಗಿರೀಶ್, ಲಿಂಗೇಗೌಡ, ಶ್ರೀನಿವಾಸ್, ಅಬ್ದುಲ್ ಕರೀಂ, ಅಯೂಬ್ ಖಾನ್, ರಿಯಾಜ್, ಕಲೀಂ ಪಾಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net