ಜೀವ ಉಳಿಸಲು ರಕ್ತದಾನ ಮಾಡಿ

16ss1Raktadaanigalu
ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ ರಕ್ತದಾನಿಗಳು.
Published on

ಶನಿವಾರಸಂತೆ: ಆಸ್ಪತ್ರೆಗಳಲ್ಲಿ ರೋಗಗಳಿಗೆ ರಕ್ತದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ರಕ್ತನಿಧಿ ಕೇಂದ್ರದಲ್ಲಿ ಕೊರತೆಯನ್ನು ನೀಗಿಸಲು ಸಹಕರಿಸಿ ಎಂದು ಮಡಿಕೇರಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಮನವಿ ಮಾಡಿದರು.

ಮಡಿಕೇರಿ ರಕ್ತನಿಧಿ ಕೇಂದ್ರ, ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಆಸ್ಪತ್ರೆಗಳಲ್ಲಿ ರಕ್ತಹೀನತೆ ಸಮಸ್ಯೆ, ಅಪಘಾತ, ಶಸ್ತ್ರ ಚಿಕಿತ್ಸೆ, ರಕ್ತಸ್ರಾವ, ಡೆಂೆ ಸೇರಿದಂತೆ ಇತರ ಕಾಯಿಲೆಗಳಿಗೆ ರಕ್ತದ ಅಗತ್ಯ ಇರುತ್ತದೆ. ಆದರೆ ರಕ್ತನಿಧಿ ಕೇಂದ್ರದಲ್ಲಿ ಕೊರತೆ ಇದ್ದು, ಶಿಬಿರಗಳ ಮೂಲಕ ಸಂಗ್ರಹ ಮಾಡಲಾಗುತ್ತದೆ. ಮಳೆಯ ನಡುವೆ ಕೊಡ್ಲಿಪೇಟೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ರಕ್ತದಾನಿಗಳನ್ನು ಸೇರಿಸಿ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದನಿಕಾ ಮಾತನಾಡಿ, ರಕ್ತದಾನ ಶಿಬಿರ ಯಶಸ್ವಿಯಾಗಲು ಇಲ್ಲಿನ ಸಂಘ-ಸಂಸ್ಥೆಗಳು, ಉತ್ಸಾಹದಿಂದ ಬಂದು ರಕ್ತದಾನ ಮಾಡಿದ ದಾನಿಗಳು ಕಾರಣರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಸಹಕಾರ ನೀಡುವಂತೆ ಮನವಿ ಮಾಡಿದರು.

ರಕ್ತದಾನ ಶಿಬಿರದಲ್ಲಿ ಮಳೆಯ ನಡುವೆ 50ಕ್ಕೂ ಹೆಚ್ಚಿನ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಆರೋಗ್ಯ ಶಿಕ್ಷಣಾಧಿಕಾರಿ ಟಿ.ಕೆ.ಮಂಜುಳಾ, ಆರೋಗ್ಯ ಸಹಾಯಕಿ ಎಂ.ಎಂ.ವನಿತಾ, ಆಸ್ಪತ್ರೆಯ ಸಿಬ್ಬಂದಿ ಮಹೇಶ್, ಅನಿತಾ, ಸವಿತಾ ನಂದೀಶ್, ವಿಶಾಲ್, ಕೇಶವಮೂರ್ತಿ, ಆಶಾ ಕಾರ್ಯಕರ್ತೆಯರಾದ ಶಾಹಿದಾ, ತ್ರಿವೇಣಿ, ರಾಜೇಶ್ವರಿ, ಪ್ರವೀಣ, ಪ್ರಮುಖರಾದ ಅಶ್ರಫ್, ಶಿಕ್ಷಕ ಸಂಪತ್, ಎಎಸ್‌ಐ ಚನ್ನಯ್ಯ, ರೋಟರಿ ಹೇಮಾವತಿ ಸಂಸ್ಥೆಯ ಎಚ್.ಜೆ.ಪ್ರವೀಣ್, ಬಿ.ಕೆ.ಯತೀಶ್, ಕೊಡ್ಲಿಪೇಟೆ ಗ್ರಾಪಂ ಸದಸ್ಯ ಹನೀಫ್, ಮುನೀರ್ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net