

ಮಂಡ್ಯ: ನಗರದ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 200 ಯುನಿಟ್ ರಕ್ತಸಂಗ್ರಹವಾಯಿತು.
ಯುವ ರೆಡ್‌ಕ್ರಾಸ್ ಘಟಕ, ಎನ್‌ಎಸ್‌ಎಸ್, ಎನ್‌ಸಿಸಿ ರೋವರ್ಸ್ ಮತ್ತು ಪಿಇಎಸ್ ಕಾಲೇಜಿನ ಸಹಯೋಗದೊಂದಿಗೆ ಆಯೋಜಿಸಿದ್ದ ಶಿಬಿರದಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ಈ ಮೂಲಕ ಸಾಮಾಜಿಕ ಕಳಕಳಿ ಮೆರೆದರು.
ಶಿಬಿರ ಉದ್ಘಾಟಿಸಿದ ರೆಡ್‌ಕ್ರಾಸ್ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ರಕ್ತವೇ ಯಾವುದೇ ಪರ್ಯಾಯ ವಸ್ತುವಿಲ್ಲ. ಆಧುನಿಕ ಪ್ರಪಂಚ ಎಷ್ಟೇ ಅಭಿವೃದ್ಧಿಯಾದರೂ ಮಾನವನ ಜೀವ ಉಳಿಸಲು ರಕ್ತಕ್ಕೆ ರಕ್ತವೇ ಅನಿವಾರ್ಯ. ಆದ್ದರಿಂದ ಮಾನವೀಯತೆ ಮೆರೆಯುವ ರಕ್ತದಾನಿಗಳಿಂದ ರಕ್ತವನ್ನು ಸಂಗ್ರಹಿಸಿ ಅವಶ್ಯಕವಿರುವವರಿಗೆ ನೀಡಬೇಕಾಗಿದೆ. ಜೀವ ಉಳಿಸಿದ ತೃಪ್ತಿ ರಕ್ತದಾನಿಗಳದ್ದಾಗಿರುತ್ತದೆ. ಆರೋಗ್ಯವಂತ ವಯಸ್ಕರು ರಕ್ತದಾನ ಮಾಡಿ ಜೀವ ಉಳಿಸಿ ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಜೆ.ಮಹದೇವ ಮಾತನಾಡಿ, ರಕ್ತದಾನ ಮಾಡಿ ಧರ್ಮಕಾರ್ಯಕ್ಕೆ ಎಲ್ಲರೂ ಭಾಗಿಯಾಗಬೇಕು. ಜೀವ ಉಳಿಸುವ ನಿಟ್ಟಿನಲ್ಲಿ ತಮ್ಮದೇ ಆದ ಕೊಡುಗೆ ನೀಡಬೇಕು. ಪ್ರತಿವರ್ಷವೂ ನಮ್ಮ ಕಾಲೇಜಿನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗುತ್ತದೆ. ಹೆಚ್ಚು ರಕ್ತ ಸಂಗ್ರಹಿ ನೀಡುವ ಕಾಲೇಜು ಎನ್ನುವ ಪುರಸ್ಕಾರ ದೊರೆತಿದೆ ಎಂದರು.
ಯುವ ರೆಡ್‌ಕ್ರಾಸ್ ಘಟಕದ ಮುಖ್ಯಸ್ಥ ಪ್ರೊ.ಜಯರಾಂ ಮಾತನಾಡಿ, 2018-19ನೇ ಸಾಲಿನಿಂದ ಇಲ್ಲಿಯತನಕ ನಮ್ಮ ಕಾಲೇಜು ರಕ್ತ ಸಂಗ್ರಹಿಸುವುದರಲ್ಲಿ ಪ್ರಥಮ ಸ್ಥಾನದಲ್ಲಿದೆ. ರಕ್ತದಾನಕ್ಕೆ ವಿದ್ಯಾರ್ಥಿ ಸಮೂಹ ಸಹಕಾರ ನೀಡುತ್ತಿದೆ. ವಿದ್ಯಾರ್ಥಿಗಳ ಸೇವಾ ಮನೋಭಾವಕ್ಕೆ ಎಲ್ಲರೂ ಅಭಿನಂದಿಸೋಣ ಎಂದು ಹೇಳಿದರು.
ಉಪನ್ಯಾಸಕರಾದ ಪ್ರೊ.ವೀರೇಶ್, ಪ್ರೊ.ಮರಿಯಯ್ಯ, ಪ್ರೊ.ಶಿವರಾಂ, ಪ್ರೊ.ಡೇವಿಡ್, ಡಾ.ಮಂಜುನಾಥ್, ಪ್ರೊ.ಜೋಗಿಗೌಡ, ಪ್ರೊ.ಚಂದ್ರಶೇಖರ್ ಇತರರಿದ್ದರು.