ರಕ್ತ ಸಂಗ್ರಹಕ್ಕೆ ಜಿಲ್ಲಾಸ್ಪತ್ರೆ ರಕ್ತನಿಧಿ ಸಿದ್ಧತೆ ; ಕರೊನಾ ಲಸಿಕೆ ಪಡೆದವರು 14 ದಿನ ರಕ್ತದಾನ ಮಾಡುವಂತಿಲ್ಲ ; ರಕ್ತದ ಕೊರತೆ ಸೃಷ್ಟಿಯಾಗುವ ಆತಂಕ

TMK_Hosptl 2
Published on

ತುಮಕೂರು ; ಕರೊನಾ ಲಸಿಕೆ ಪಡೆದವರು 14 ದಿನ ರಕ್ತದಾನ ಮಾಡಲು ಅವಕಾಶ ಇಲ್ಲದಿರುವುದರಿಂದ ಮುಂದೆ ರಕ್ತದ ಕೊರತೆ ಉಂಟಾಗುವ ಆತಂಕ ಎದುರಾಗಿದೆ. ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲಾ ಆಸ್ಪತ್ರೆ ರಕ್ತನಿಧಿ ಘಟಕ ಸಿದ್ಧತೆ ಮಾಡಿಕೊಂಡಿದೆ.

ಕಳೆದೊಂದು ತಿಂಗಳಿನಿಂದ ಜನತಾ ಕರ್ಫ್ಯೂ ಜಾರಿಯಲ್ಲಿತ್ತು. ಹೀಗಾಗಿ ಅಪಘಾತಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಈ ಕಾರಣಕ್ಕೆ ರಕ್ತಕ್ಕೆ ಬೇಡಿಕೆ ಇರಲಿಲ್ಲ. ಅಲ್ಲದೆ, ಈ ಅವಧಿಯಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ರಕ್ತಸಂಗ್ರಹಕ್ಕೆ ಆದ್ಯತೆ ಕೊಡಲಾಗಿದೆ. ರಕ್ತನಿಧಿ ಘಟಕದ ಕೌನ್ಸೆಲರ್‌ಗಳು, ಕೈಗಾರಿಕೆಗಳು, ವಿವಿಧ ಕಚೇರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಭೇಟಿ ಮಾಡಿ ರಕ್ತದಾನದ ಅರಿವು ಮೂಡಿಸಲಾಗಿದೆ. ಜತೆಗೆ ಶಿಬಿರ ಆಯೋಜಿಸಲು ಅವರನ್ನು ಪ್ರೇರೇಪಿಸಿ, ರಕ್ತದ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ.

8 ಬ್ಲಡ್ ಬ್ಯಾಂಕ್: ಜಿಲ್ಲೆಯಲ್ಲಿ 8 ಬ್ಲಡ್ ಬ್ಯಾಂಕ್‌ಗಳಿವೆ. ತಾಲೂಕು ಆಸ್ಪತ್ರೆಯಲ್ಲಿ ರಕ್ತ ಸಂಗ್ರಹ ಕೇಂದ್ರಗಳಿವೆ. ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರದಲ್ಲಿ ಸರಾಸರಿ 15 ಸಾವಿರಕ್ಕೂ ಹೆಚ್ಚು ರಕ್ತದಾನಿಗಳ ಮಾಹಿತಿ ಇದೆ. ರಕ್ತ ಪಡೆದ ದಿನದಿಂದ 35 ದಿನದವರೆಗೆ ರಕ್ತವನ್ನು ಸಂಗ್ರಹಿಸಿಡಬಹುದು. ಅಲ್ಲದೆ, ರಕ್ತದಾನ ಸಂದರ್ಭದಲ್ಲಿ ದಾನಿಯ ರಕ್ತ ಮಾದರಿ ಪರೀಕ್ಷೆ ಮಾಡಲಿದ್ದು, ಎಚ್‌ಐವಿ ಪಾಸಿಟಿವ್, ಹೆಪಾಟೈಟೀಸ್ -ಬಿ, ಹೆಪಾಟೈಟೀಸ್-ಸಿ, ಗುಪ್ತರೋಗ ಹಾಗೂ ಮಲೇರಿಯಾ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ರಕ್ತದಾನದಿಂದ ಜೀವ ಉಳಿಸಿದ ಸಂತೃಪ್ತಿ ದೊರೆಯುತ್ತದೆ.

ವಿಶ್ವ ರಕ್ತದಾನ ದಿನಾಚರಣೆ ?: ಎ, ಬಿ, ಒ ರಕ್ತದ ಗುಂಪುಗಳನ್ನು 1901ರಲ್ಲಿ ಅನ್ವೇಷಣೆ ಮಾಡಿದ ಅಮೆರಿಕದ ಜೀವಶಾಸ್ತ್ರಜ್ಞ ಕಾರ್ಲ್ ಲ್ಯಾಂಡ್‌ಸ್ಟೈನರ್ ಅವರ ಜನ್ಮದಿನವಾದ ಜೂ.14ರಂದು ವಿಶ್ವ ರಕ್ತದಾನ ದಿನ ಆಚರಿಸಲಾಗುತ್ತಿದೆ. 18 ರಿಂದ 60 ವರ್ಷ ವಯೋಮಾನದವರೆಗೆ ಆರೋಗ್ಯವಂತರು ರಕ್ತದಾನ ಮಾಡಬಹುದು. ಒಬ್ಬ ವ್ಯಕ್ತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಅಪಘಾತ, ಹೆರಿಗೆ ಹಾಗೂ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಸಾವು-ನೋವು ಸಂಭವಿಸುವುದನ್ನು ತಪ್ಪಿಸಬಹುದಾಗಿದೆ.

ಯಾರು ರಕ್ತದಾನ ಮಾಡಬಹುದು.. : 18 ರಿಂದ 65 ವರ್ಷ ವಯಸ್ಸಿನವರಾಗಿರಬೇಕು.

ತೂಕ 45 ಕೆಜಿ ಅಥವಾ ಅದಕ್ಕಿಂತ ಹೆಚ್ಚಿರಬೇಕು., ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶವು ಕನಿಷ್ಠ ಶೇ.12.5 ಗ್ರಾಂ ಇರಬೇಕು., ಪುರುಷರು 3 ಅಥವಾ ಹೆಚ್ಚು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು., ಮಹಿಳೆಯರು 4 ತಿಂಗಳು ಅಥವಾ ಹೆಚ್ಚು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು

ಯಾರು ರಕ್ತದಾನ ಮಾಡಬಾರದು?:  ಎಚ್‌ಐವಿ ಪಾಸಿಟಿವ್ ಆಗಿದ್ದಲ್ಲಿ ,  ಒಬ್ಬರಿಗಿಂತ ಹೆಚ್ಚು ಮಂದಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದ್ದಿದ್ದವರು ,  ಲೈಂಗಿಕ ಕಾರ್ಯಕರ್ತೆಯರಾಗಿದ್ದಲ್ಲಿ,  ಯಾವುದಾದರೂ ಸೋಂಕಿನಿಂದ ಬಳಲುತ್ತಿದ್ದು ರೋಗನಿರೋಧಕಗಳನ್ನು ಹಾಗೂ ಔಷಧಗಳನ್ನು ಬಳಸುತ್ತಿದ್ದಲ್ಲಿ,  ಹೃದಯರೋಗ, ಹೈಪರ್‌ಟೆನ್ಷನ್, ಮೂರ್ಛೆ ರೋಗ, ಡಯಾಬಿಟಿಸ್, ಕ್ಯಾನ್ಸರ್, ಕ್ರಾನಿಕ್ ಕಿಡ್ನಿ ಅಥವಾ ಲಿವರ್‌ಡಿಸೀಸ್, ರಕ್ತ ಸೋರುವಿಕೆ, ಗುಪ್ತ ರೋಗ ಮತ್ತಿತರ ರೋಗಗಳಿಂದ ಬಳಲುತ್ತಿರುವವರು

ಜಿಲ್ಲೆಯಲ್ಲಿ ಕರೊನಾ 2ನೇ ಅಲೆ ಸಂದರ್ಭದಲ್ಲಿ ರಕ್ತದ ಕೊರತೆ ಇರಲಿಲ್ಲ. ಕರೊನಾ ಲಸಿಕೆ ಪಡೆದು ಈಗಾಗಲೇ 15 ದಿನ ಆಗಿರುವ 45 ವರ್ಷ ಮೇಲ್ಪಟ್ಟವರ ಸಂಖ್ಯೆ ಹೆಚ್ಚಾಗಿದೆ. ಅವರು ರಕ್ತದಾನ ಮಾಡಬಹುದು. ಡಾ.ಎಸ್.ವೀಣಾ, ರಕ್ತನಿಧಿ ವೈದ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net