

ಮಡಿಕೇರಿ: ಆರೋಗ್ಯವಂತರಿಂದ ಮಾತ್ರ ಸದೃಢ, ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಈ ನಿಟ್ಟಿನಲ್ಲಿ ದುಶ್ಚಟಗಳಿಗೆ ದಾಸರಾಗದೆ ಸಮಾಜದ ಸ್ವಾಸ್ತ್ಯ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಕರೆ ನೀಡಿದರು.
ಕೊಡಗು ಬ್ಲಡ್ ಡೋನರ್ಸ್ ಅಸೋಸಿಯೇಷನ್‌ನ ೨ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ನಗರದ ಬಾಲಭವನದಲ್ಲಿ ಸೋಮವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
೨ ವರ್ಷದಲ್ಲಿ ಸಂಘಟನೆ ಬಹಳಷ್ಟು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಬರೀ ರಕ್ತದಾನವಲ್ಲದೆ ಕರೊನಾ ಪರಿಸ್ಥಿತಿಯಲ್ಲಿ ಬಡವರ ಕಷ್ಟಕ್ಕೆ ಸ್ಪಂದನ ನೀಡಿದೆ. ಜಾಗೃತಿ ಕಾರ್ಯಕ್ರಮದ ಮೂಲಕ ರಕ್ತದಾನದ ಮಹತ್ವವನ್ನು ತಿಳಿಸುತ್ತಿರುವುದು ಶ್ಲಾಘನೀಯ. ಹಣಕ್ಕಾಗಿ ಯಾರು ರಕ್ತದಾನ ಮಾಡದೆ ಅದೊಂದು ಸೇವೆ ಎಂಬುದನ್ನು ಮನಗಾಣಬೇಕು. ರಕ್ತವನ್ನು ದಾನ ಪಡೆದವರು ಕೂಡ ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ತಮ್ಮಿಂದ ಆಗುವ ಸಹಾಯ ಮಾಡಬೇಕೆಂದು ಕರೆ ನೀಡಿದ ಅವರು, ಜಿಲ್ಲೆಯಲ್ಲಿ ಮಾದಕ ದ್ರವ್ಯಕ್ಕೆ ಯುವಕರು ಬಲಿಯಾಗುತ್ತಿರುವುದು ವಿಷಾಧನೀಯ. ಡ್ರಗ್ಸ್ ಮುಕ್ತ ಕೊಡಗು ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಕರ್ನಾಟಕ ಬ್ಲಡ್ ಹೆಲ್ಪ್ಲೈನ್ ಸಂಘಟನೆಯ ಪ್ರಮುಖ ಇರ್ಫಾನ್, ರಕ್ತ ನೀಡಿ ಜೀವ ಉಳಿಸಿ ಸಂಘಟನೆಯ ಮುಖ್ಯಸ್ಥ ಶ್ರೀಧರ್ ಕುಮಟಕರ್ ಸೇರಿದಂತೆ ೪ ತಿಂಗಳಿಗೊಮ್ಮೆ ರಕ್ತದಾನ ಮಾಡುವ ಶಮೀರ್, ರಾಮಪ್ಪ, ದಿಲನ್ ದೇವಯ್ಯ, ಶರೀಫ್‌ರವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ ವಿವಿಧ ಸಂಘಟನೆ ಸದಸ್ಯರು, ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.
ಈ ಸಂದರ್ಭ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ, ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ಮುಖ್ಯವೈದ್ಯಾಧಿಕಾರಿ ಡಾ.ಕರುಂಬಯ್ಯ, ಬ್ಲಡ್ ಡೋನರ್ಸ್ ಸಂಸ್ಥೆ ಅಧ್ಯಕ್ಷ ಎಚ್.ಆರ್.ವಿನು, ಕಾರ್ಯದರ್ಶಿ ಮೈಕಲ್ ವೇಗಸ್ ಸೇರಿದಂತೆ ಇನ್ನಿತರರು ಇದ್ದರು.