

ನಾಲತವಾಡ: ಲಿಂಗಸುಗೂರು- ಶಿರಾಡೋಣ ಡಾಂಬರ್ ರಸ್ತೆಯ ಅರ್ಧ ಭಾಗದ ಮಧ್ಯದಲ್ಲಿ ಪಕ್ಕದ ವೀರೇಶ್ವರ ವಿದ್ಯಾ ಸಂಸ್ಥೆಯವರು ಅತಿಕ್ರಮಿಸಿ ಅನಧಿಕೃತವಾಗಿ ಕಾಂಪೌಂಡ್ ನಿರ್ಮಿಸಿಕೊಳ್ಳುತ್ತಿರುವುದನ್ನು ಗಮನಿಸಿದ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು, ಶಾಸಕ ಸಿ.ಎಸ್. ನಾಡಗೌಡ ಸ್ಥಳಕ್ಕೆ ಭೇಟಿ ನೀಡಿ ಕಾಂಪೌಂಡ್ ಕಾಮಗಾರಿಯನ್ನು ರದ್ದುಗೊಳಿಸಿ, ಸಂಸ್ಥೆಯವರಿಗೆ ಮಿತಿ ಮೀರಬಾರದು ಎಂದು ಎಚ್ಚರಿಕೆ ಕೊಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ.
ವೀರೇಶ್ವರ ಸಂಸ್ಥೆಯವರು ಅರ್ಧ ರಸ್ತೆ ತಮ್ಮ ಸ್ವಾಧೀನದಲ್ಲಿದೆ ಎಂದು ಕಾಂಪೌಂಡ್ ನಿರ್ಮಿಸಿಕೊಳ್ಳುತ್ತಿದ್ದುದನ್ನು ಬೆಳಗ್ಗೆಯಿಂದಲೇ ಪ.ಪಂ. ಉಪಾಧ್ಯಕ್ಷ ಬಸವರಾಜ ಗಂಗನಗೌಡ ಹಾಗೂ ಹಲವರು ಯುವಕರು ಶಾಸಕ ನಾಡಗೌಡ ಅವರಿಗೆ ದೂರು ನೀಡಿ ತಡೆವೊಡ್ಡಿದ್ದರು.
ಪಟ್ಟಣ ಪಂಚಾಯಿತಿಯವರೂ ಸಹ ಸ್ಥಳಕ್ಕೆ ಆಗಮಿಸಿ ನಿರ್ಮಿಸದಂತೆ ಎಚ್ಚರಿಕೆ ಕೊಟ್ಟಿದ್ದರೂ ಸಹ ಜಗ್ಗದ ಸಂಸ್ಥೆಯವರು ಯಾರು ಬರುತ್ತಾರೆ ನೋಡೋಣ ಎಂದು ಕಾಂಪೌಂಡ್ ನಿರ್ಮಿಸಲು ಮುಂದಾಗಿದ್ದರು.
ಸ್ಥಳಕ್ಕೆ ಆಗಮಿಸಿ ಗಮನಿಸಿದ ಶಾಸಕ ನಾಡಗೌಡ ಅವರು ಸಂಸ್ಥೆಯವರು ಮನಬಂದಂತೆ ಗುಂಡಿಗಳನ್ನು ಅಗೆದಿದ್ದು ಕಂಡು ಸಾರ್ವಜನಿಕರ ಕುಡಿಯುವ ನೀರಿನ ಪೈಪ್‌ಗಳನ್ನೇ ಅಗೆದು ಕಾಂಪೌಂಡ್ ನಿರ್ಮಿಸಿಕೊಳ್ಳುತ್ತಿರುವುದು ಮತ್ತಷ್ಟು ರೊಚ್ಚಿಗೇರಿಸಿತು. ತಕ್ಷಣವೇ ಪ.ಪಂ ಅಧಿಕಾರಿ ಈರಣ್ಣ ಕೊಣ್ಣೂರ ಅವರನ್ನು ಜೆಸಿಬಿಯೊಂದಿಗೆ ಬರಮಾಡಿಕೊಂಡು ಕಾಂಪೌಂಡ್ ನಿರ್ಮಿಸುವ ಗುಂಡಿಗಳನ್ನು ಮುಚ್ಚಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಎಚ್ಚರಿಕೆ: ಸುಸಜ್ಜಿತ ಡಾಂಬರ್ ರಸ್ತೆ ನಿರ್ಮಿಸಲಾಗಿದ್ದು, ಇದೇ ರಸ್ತೆಯ ಮೂಲಕ ಗಡಿರಾಜ್ಯ ಸೇರಿ ನಿತ್ಯ ನೂರಾರು ಸಾರಿಗೆ ಹಾಗೂ ಬೃಹತ್ ವಾಹನಗಳು, ಕಬ್ಬು ಸಾಗಣೆ ವಾಹನಗಳು ಸಂಚರಿಸುತ್ತವೆ. ತಾವು ಆಸ್ತಿ ನಮ್ಮದೆ ಎನ್ನುವಂತೆ ಅರ್ಧ ರಸ್ತೆಗೆ ಬಂದು ಕಾಂಪೌಂಡ್ ನಿರ್ಮಿಸಿಕೊಳ್ಳುತ್ತಿದ್ದೀರಲ್ಲ. ಇದು ಸಾರ್ವಜನಿಕರ ಆಸ್ತಿ ಕಬಳಿಕೆ ಎಷ್ಟು ಸರಿ? ಎಂದ ಅವರು ಈಗಾಗಲೇ ಸಾಕಷ್ಟು ದೂರುಗಳಿವೆ. ತಮ್ಮ ಸಂಸ್ಥೆಗೆ ನಾ ಎಂಟ್ರಿ ಕೊಡಬೇಕಾಗುತ್ತೆ ಎಂದು ಬುದ್ಧಿ ಹೇಳಿ ತೆರಳಿದರು.
ರಾಯನಗೌಡ ತಾತರಡ್ಡಿ, ಪ.ಪಂ. ಉಪಾಧ್ಯಕ್ಷ ಬಸವರಾಜ ಗಂಗನಗೌಡ, ಅಮರಪ್ಪ ಗಂಗನಗೌಡ, ಪ್ರಭು ಡೇರೇದ, ಜಗದೀಶ ಡೇರೆದ, ಬಾಬು ಡೇರೇದ, ವೀರೇಶ ಗಂಗನಗೌಡ, ಸಂಗಮೇಶ ಗಂಗನಗೌಡ, ಚಂದ್ರಶೇಖರ ಮೇಟಿ, ಅಮರ ದೇಶಮುಖ, ಎಚ್.ಟಿ.ಕುರಿ, ಶರಣು ಕಾನಿಕೇರಿ, ಪ್ರಶಾಂತ ಕೆಂಭಾವಿ, ಮಹಾಂತೇಶ ಚಲವಾದಿ, ಬಾಬು ಕ್ಷತ್ರಿ, ರಮೇಶ ಆಲಕೊಪ್ಪರ, ಸಿದ್ದಣ್ಣ ಆಲಕೊಪ್ಪರ, ಶಿವಪ್ಪ ಗಂಗನಗೌಡ, ಅಮರೇಶ ಯರಗುಂಟಿ, ಅಮರೇಶ ವಡಗೇರಿ, ವೀರೇಶ ಕಂದಗಲ್, ಅಮರೇಶ ಮುದಗಲ್ ಇದ್ದರು.