

ಮುಳಬಾಗಿಲು : ಜಿಲ್ಲೆಯಲ್ಲಿ 12 ಅನುದಾನಿತ ಪದವಿ ಪೂರ್ವ ಕಾಲೇಜುಗಳಿದ್ದು, ಇದರ ಪೈಕಿ ಸುಮಾರು 10 ಕಾಲೇಜುಗಳ ಎಲ್ಲ ಉಪನ್ಯಾಸಕರು ಮತ್ತು ಸಿಬ್ಬಂದಿಗೆ ಯಾವುದೇ ಮುನ್ಸೂಚನೆ ನೀಡದೆ ಪದವಿ ಪೂರ್ವ ಶಿಕ್ಷಣ ಇಲಾಖೆ ವೇತನ ತಡೆ ಹಿಡಿದಿದ್ದು, ಜೀವನ ನಡೆಸಲು ಪರದಾಡುವಂತೆ ಮಾಡಿದೆ.
ಸರ್ಕಾರ ಕೂಡಲೇ ವೇತನ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಒಕ್ಕೂಟ ಮನವಿ ಮಾಡಿದೆ. ಇಲಾಖೆ ರ್ನಿಲಕ್ಷ$್ಯದಿಂದ ಸುಮಾರು 70 ಕ್ಕೂ ಹೆಚ್ಚಿನ ಉಪನ್ಯಾಸಕರು ಮತ್ತು ಸಿಬ್ಬಂದಿ ಕುಟುಂಬ ಉಪವಾಸ ಬೀಳುವ ಭಾಗ್ಯವನ್ನು ಸರ್ಕಾರ ಕರುಣಿಸಿದೆ.
ಸುಮಾರು 30 ವರ್ಷಗಳಿಂದ ಯಾವುದೇ ಸಮಸ್ಯೆ ಇಲ್ಲದೆ ಕಾಲೇಜಿನಲ್ಲಿ ಕೆಲಸ ಕಾರ್ಯಗಳು ಸುಗಮವಾಗಿ ನಡೆದುಕೊಂಡು ಹೋಗುತ್ತಿದ್ದು, ಈಗ ಕೆಲ ನೌಕರರನ್ನು ಜಿಲ್ಲೆಯ ಇತರ ಅನುದಾನಿತ ಕಾಲೇಜುಗಳಿಗೆ ನಿಯೋಜನೆ ಮಾಡಲಾಗಿದೆ. ಉಳಿದ ನೌಕರರನ್ನು ಬೇರೆಬೇರೆ ಅನುದಾನಿತ ಕಾಲೇಜುಗಳಲ್ಲಿ ಕಾರ್ಯಭಾರವಿಲ್ಲವೆಂದು, ಸರ್ಕಾರಿ ಪಿಯು ಕಾಲೇಜುಗಳಲ್ಲಿ ಕಾರ್ಯಭಾರವಿದ್ದರೂ ನಿಯೋಜನೆ ಮಾಡದೆ ವೇತನ ತಡೆ ಹಿಡಿದು ಅತಂತ್ರ ಸ್ಥಿತಿಗೆ ನೂಕಲಾಗಿದೆ.
ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಉಪನಿರ್ದೇಶಕರನ್ನು ವೇತನ ಬಗ್ಗೆ ವಿಚಾರಿಸಿದರೆ ನಿರ್ದೇಶಕರನ್ನು ಕೇಳಿ ಎನ್ನುತ್ತಾರೆ. ನಿರ್ದೇಶಕರನ್ನು ಕೇಳಿದಾಗ ನಮ್ಮದೇನೂ ಇಲ್ಲ, ಸರ್ಕಾರವನ್ನೇ ಕೇಳಿ ಎಂಬ ಉತ್ತರದಿಂದ ಆತಂಕಗೊಂಡ, ಹೆಸರು ಹೇಸರು ಹೇಳಲು ಇಚ್ಚಿಸದ ಹಲವು ಸರ್ಕಾರಿ, ಅನುದಾನಿತ ಖಾಸಗಿ ಪಿ.ಯು. ಕಾಲೇಜುಗಳ ಉಪನ್ಯಾಸಕರು ವಿಜಯವಾಣಿ ಬಳಿ ತಮ್ಮ ಅಳಲು ತೋಡಿಕೊಂಡರು.
ಮನವಿಗೂ ಸ್ಪಂದಿಸದ ಸರ್ಕಾರ
ಇವೆಲ್ಲದರ ಮಧ್ಯೆ ಕೆಲವರು ಧೈರ್ಯ ಮಾಡಿ ಕಾರ್ಯಭಾರ ಕಡಿಮೆ ಇರುವ ನೌಕರರನ್ನು ಹತ್ತಿರದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ನಿಯೋಜನೆ ಮಾಡಿಸಿ, ತಕ್ಷಣ ವೇತನ ಬಿಡುಗಡೆ ಮಾಡುವಂತೆ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಕೇಶವ ನೇತೃತ್ವದಲ್ಲಿ ಸದಸ್ಯರಾದ ಶ್ರೀನಿವಾಸ್, ನಾರಾಯಣಸ್ವಾಮಿ, ಶ್ರೀನಿವಾಸಲು, ಅಬ್ಬಯ್ಯ ಇಲಾಖೆಗೂ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸಹ ಇನ್ನೂ ಸ್ಪಂದನೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುನ್ಸೂಚನೆ ನೀಡದೇ ಕ್ರಮ
ಸುಮಾರು 25&-30 ವರ್ಷಗಳಿಂದ ಸಂಬಳ ಪಡೆಯುತ್ತಾ ಅದಕ್ಕೆ ಹೊಂದಿಕೊಂಡು ಜೀವನ ನಡೆಸುತ್ತಾ ಬಂದಿರುವ ನಮಗೆ ಯಾವುದೇ ಮುನ್ಸೂಚನೆ ನೀಡದೆ, ಲಿಖಿತ ಆದೇಶವೂ ಇಲ್ಲದೆ ಇದ್ದಕ್ಕಿದ್ದಂತೆ ವೇತನ ತಡೆ ಹಿಡಿದ ಕಾರಣದಿಂದ ಸಮಸ್ಯೆಗಳು ಎದುರಾಗಿವೆ. ಎಲ್ಲರೂ ಸಹ ಮನೆ ಸಾಲ, ವೈಯಕ್ತಿಕ ಸಾಲ ಎಂದು ಹಲವು ಬ್ಯಾಂಕ್ಗಳಲ್ಲಿ ಸಾಲ ಎತ್ತಿದ್ದು, ಬ್ಯಾಂಕಿನ ನಿಯಮಗಳು ಸಹ ಬಹಳ ಬಿಗಿಯಾಗಿದ್ದರಿಂದ ನಿತ್ಯ ಬ್ಯಾಂಕಿನವರು ಮನೆ ಬಾಗಿಲಿಗೆ ಅಡ್ಡಾಡುತ್ತಿದ್ದಾರೆ. ಸಾಲದ ಕಂತು ಕಟ್ಟದಿದ್ದರೆ ಮನೆ ಹರಾಜಿಗೆ ಬರುತ್ತದೆ ಎಂಬ ಒತ್ತಡ ಹೆಚ್ಚಾಗುತ್ತಿದ್ದು ಅತಂತ್ರ ಸ್ಥಿತಿಯಲ್ಲಿದ್ದೇವೆ ಎಂದು ಉಪನ್ಯಾಸಕರು ಅಳಲು ತೋಡಿಕೊಂಡರು.ನಮ್ಮಿಂದ ಆಯ್ಕೆಯಾಗಿ ಹೋದ ಜನಪ್ರತಿನಿಧಿಗಳಾದರೂ ಇತ್ತ ಗಮನಹರಿಸಿ ಸಮಸ್ಯೆ ಸರಿಪಡಿಸಬೇಕಿದೆ ಎಂದರು.
ಸಾಲ ಮಾಡುವ ಸ್ಥಿತಿ
ಜಿಲ್ಲೆಯೊಳಗೆ ಇತರ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಬಹಳಷ್ಟು ಕಾರ್ಯಭಾರ ಕೊರತೆ ಇರುವ ಹುದ್ದೆಗಳಿವೆ. ಅನುದಾನಿತ ನೌಕರರೂ ಸಹ ಜಿಲ್ಲೆಯಲ್ಲಿ ಎಲ್ಲಿ ಬೇಕಾದರೂ ಕೆಲಸ ನಿರ್ವಹಿಸಲು ಸಿದ್ಧರಿದ್ದಾರೆ. ಆದರೂ ಅವರನ್ನು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ನಿಯೋಜನೆ ಮಾಡಿಲ್ಲ. ಇದರಿಂದ ವೇತನ ವಂಚಿತರು ತಮ್ಮ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣಕ್ಕೆ ಸಾಲ ಪಡೆಯಬೇಕಾದ ಪರಿಸ್ಥಿತಿ ಎದುರಾಗಿದೆ.
ನ್ಯಾಯಕ್ಕಾಗಿ ಆಗ್ರಹ
ಸರ್ಕಾರ ಇದ್ದಕ್ಕಿದ್ದಂತೆ ಸರ್ಕಾರಿ ಅನುದಾನಿತ ಪಿಯು ಕಾಲೇಜುಗಳ ಉಪನ್ಯಾಸಕರು ಮತ್ತು ಸಿಬ್ಬಂದಿ ವೇತನ ತಡೆಹಿಡಿದು. ಅತಂತ್ರ ಸ್ಥಿತಿಯಲ್ಲಿಟ್ಟು, ವೇತನ ನೀಡದೆ ಉಪವಾಸ ಭಾಗ್ಯ ನೀಡಿದ್ದು, ಈ ಬಗ್ಗೆ ಧ್ವನಿ ಎತ್ತಲು ಸಾಧ್ಯವಾಗದ ನಮ್ಮ ಪರವಾಗಿ ನಿಂತ ವಿಜಯವಾಣಿ ಧ್ವನಿ ಎತ್ತಿ ನ್ಯಾಯ ಕೊಡಿಸಬೇಕು ಎಂದು ಹೆಸರು ಹೇಳಲು ಇಚ್ಚಿಸದ ವೇತನ ವಂಚಿತ ಉಪನ್ಯಾಸಕರು ಆಗ್ರಹಿಸಿದರು.
ಸರ್ಕಾರ ಮತ್ತು ಇಲಾಖೆ ಹೊರಡಿಸುವ ಆದೇಶ ಪಾಲನೆ ಮಾಡಬೇಕಾಗುತ್ತದೆ. ಸರ್ಕಾರಿ, ಅನುದಾನಿತ, ಖಾಸಗಿಯ ಪಿಯು ಕಾಲೇಜುಗಳಲ್ಲಿ ಕರ್ತವ್ಯದ ಅವಧಿ 20 ಗಂಟೆಗಳಿಗಿಂತಲೂ ಕಡಿಮೆ ಇರಬಾರದು. ಆದರೆ ಜಿಲ್ಲೆಯ 12 ಸರ್ಕಾರಿ ಅನುದಾನಿತ ಪಿಯು ಕಾಲೇಜುಗಳ ಪೈಕಿ 10 ಕಾಲೇಜುಗಳಲ್ಲಿ 10ಗಂಟೆ ಕರ್ತವ್ಯದ ಅವಧಿ ಇದೆ. ಈ ಬಗ್ಗೆ ಸರ್ಕಾರ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳೇ ಕ್ರಮವಹಿಸಬೇಕು. ನಮ್ಮ ಹಂತದಲ್ಲಿ ಇದು ಸಾಧ್ಯವಿಲ್ಲ.
ಎಂ.ಬಾಲಕೃಷ್ಣ ಜಿಲ್ಲಾ ಉಪ ನಿರ್ದೇಶಕ, ಸರ್ಕಾರಿ ಪಿಯು ಕಾಲೇಜು ಶಿಕ್ಷಣ ಇಲಾಖೆ, ಕೋಲಾರ