

ಪಾಂಡವಪುರ: ಹನುಮ ಧ್ವಜವನ್ನು ತೆರವುಗೊಳಿಸದಂತೆ ಹೋರಾಟ ನಡೆಸುತ್ತಿದ್ದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ ಹಿಂದು ಪರ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಭಾನುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಂಡ್ಯ ಶಾಸಕ ಗಣಿಗ ರವಿಕುಮಾರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ಮಾತನಾಡಿ, ಕೆರಗೋಡು ಗ್ರಾಮದ ಸಮಸ್ತ ಜನರ ಇಚ್ಛೆಯಂತೆ ದೇವಾಲಯ ಮುಂಭಾಗ 108 ಅಡಿ ಎತ್ತರದ ಧ್ವಜ ಸ್ತಂಭದ ಮೇಲೆ ಹನುಮಾನ್ ಧ್ವಜ ಹಾರಿಸಲಾಗಿತ್ತು. ಆದರೆ, ಗ್ರಾಮಸ್ಥರ ವಿರೋಧದ ನಡುವೆಯೂ ಬಲವಂತವಾಗಿ ಅಧಿಕಾರಿಗಳು ಧ್ವ್ವಜ ಇಳಿಸಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆಯಾಗಿದೆ. ಸ್ಥಳೀಯ ಕಾಂಗ್ರೆಸ್ ಶಾಸಕರ ಆಣತಿಯಂತೆ ಪೊಲೀಸರು ನಡೆದುಕೊಂಡಿದ್ದು, ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ನ್ಯಾಯಕ್ಕಾಗಿ ಶಾಂತಿಯುವಾಗಿ ಹೋರಾಟ ಮಾಡುತ್ತಿದ್ದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಿರುವುದು ಕಾಂಗ್ರೆಸ್ ಸರ್ಕಾರದ ಹಿಂದು ವಿರೋಧಿ ನೀತಿಗೆ ಉದಾಹರಣೆಯಾಗಿದೆ ಎಂದು ಆರೋಪಿಸಿದರು.
ಸಂವಿಧಾನ ಮತ್ತು ಕಾನೂನಿನ ಪ್ರಕಾರ ರಾಷ್ಟ್ರಧ್ವಜವನ್ನು ಎಲ್ಲ ಸಂದರ್ಭದಲ್ಲೂ ಹಾರಿಸುವಂತಿಲ್ಲ. ಆದರೆ ನಿಯಮಗಳನ್ನು ಗಾಳಿಗೆ ತೂರಿ ರಾಷ್ಟ್ರಧ್ವಜ ಹಾರಿಸಿರುವುದು ಅಪರಾಧ. ಈ ಕೂಡಲೇ ಹನುಮ ಭಕ್ತರ ಭಾವನೆಗೆ ಬೆಲೆಕೊಟ್ಟು ಹನುಮ ಧ್ವಜ ಹಾರಾಟಕ್ಕೆ ಅವಕಾಶ ನೀಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಜರಂಗದಳ ಕಾರ್ಯಕರ್ತರಾದ ಹಿರೇಮರಳಿ ಶ್ರೀನಿವಾಸ್, ಅರುಣ್, ರತ್ನಾಕರ, ಶಾಂತಿಪ್ರಸಾದ್, ದೊರೆಸ್ವಾಮಿ, ಕಡಬ ಪುಟ್ಟರಾಜು, ನೀಲನಹಳ್ಳಿ ಧನಂಜಯ, ಕನ್ನಂಬಾಡಿ ಸುರೇಶ್, ಲಕ್ಷ್ಮೀಶ್, ದೇವೇಗೌಡನಕೊಪ್ಪಲು ಸ್ವಾಮಿಗೌಡ, ಚಿಕ್ಕಮರಳಿ ಪ್ರಕಾಶ್ ಇತರರು ಇದ್ದರು.