ರಾಜ್ಯಕ್ಕೆ ಹರಿಯುವ ನೀರು ತಡೆ, ಗಡಿಭಾಗದಲ್ಲಿ ವ್ಯಾಪಕ ಆಕ್ರೋಶ

Screenshot_2024-05-26-22-54-30-28.jpg
Published on

ಕಾಗವಾಡ (ಬೆಳಗಾವಿ): ರಾಜ್ಯದೊಂದಿಗೆ ಆಗಾಗ ಕಾಲು ಕೆದರಿ ಜಗಳಕ್ಕೆ ಬರುವ ಮಹಾರಾಷ್ಟ್ರ ಸರ್ಕಾರ ಇದೀಗ ಕೃಷ್ಣಾ ನದಿ ನೀರಿನ ವಿಷಯವಾಗಿ ಮತ್ತೆ ಕ್ಯಾತೆ ತೆಗೆಯುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಮಹಾರಾಷ್ಟ್ರದ ಶಿರೋಳ ತಾಲೂಕಿನ ಮತ್ತು ಕರ್ನಾಟಕದ ಕಾಗವಾಡ ತಾಲೂಕಿನ ಸೀಮೆಯಲ್ಲಿರುವ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ಮೂಲಕ ಕೃಷ್ಣಾ ನದಿ ನೀರು ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಹರಿದುಬರುತ್ತದೆ. ಆದರೆ, ಮಹಾರಾಷ್ಟ್ರ ಸರ್ಕಾರ ರಾಜಾಪುರ ಬ್ಯಾರೇಜ್ ಬಳಿ ನಾಲ್ವರು ಸಿಬ್ಬಂದಿ ನಿಯೋಜನೆ ಮಾಡಿ, ನೀರು ಕರ್ನಾಟಕಕ್ಕೆ ಹರಿಯದಂತೆ ನೋಡಿಕೊಳ್ಳುತ್ತಿದೆ. ಅಷ್ಟಾದರೂ ನದಿ ನೀರು ಬ್ಯಾರೇಜ್‌ಗೆ ಹಾಕಿರುವ ತಡೆಗೋಡೆ ಮೇಲಿಂದ ಹರಿದು ನದಿ ಸೇರುತ್ತಿದೆ. ಸದಾ ಕರ್ನಾಟಕದೊಂದಿಗೆ ಒಂದಿಲ್ಲೊಂದು ತಂಟೆ ಮಾಡುತ್ತಿರುವ ಮಹಾ ಸರ್ಕಾರ ಈಗ ರಾಜಾಪುರ ಬ್ಯಾರೇಜ್ ಮೇಲೆ ಇಬ್ಬರು ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಇಬ್ಬರು ನೀರಾವರಿ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಿ ನೀರು ತಡೆಯುವ ಮೂಲಕ ಹಗೆತನ ಸಾಧಿಸುತ್ತಿದೆ. ಕುಡಿಯಲು ಹಾಗೂ ಜಾನುವಾರುಗಳಿಗೆ ಆಧಾರವಾಗುವ ನೀರನ್ನೇ ತಡೆಯುವ ಮಹಾ ಸರ್ಕಾರದ ಹುನ್ನಾರಕ್ಕೆ ಗಡಿಭಾಗದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಹಾರಾಷ್ಟ್ರಕ್ಕೆ ರಾಜ್ಯ ಸರ್ಕಾರ ತಕ್ಕ ಎಚ್ಚರಿಕೆ ನೀಡಲಿ: ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ ತುಂಬಿ ತುಳುಕಿ ಕರ್ನಾಟಕಕ್ಕೆ ಹರಿದು ಬರುತ್ತಿದ್ದ ನೀರಿಗೆ ತಡೆಯೊಡ್ಡಲು ಮಹಾರಾಷ್ಟ್ರ ಸರ್ಕಾರ ಯತ್ನಿಸುತ್ತಿದ್ದು, ಕರ್ನಾಟಕದ ಜತೆಗೆ ಜಲತಂಟೆ ಮುಂದುವರೆಸಿದೆ ಎಂದು ಕನ್ನಡಪರ  ಹೋರಾಟಗಾರ ಅಶೋಕ ಚಂದರಗಿ ಆರೋಪಿಸಿದ್ದಾರೆ.

ಈ ಕುರಿತು ಭಾನುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಎದುರಿಸುವ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು ಜಿಲ್ಲೆಗಳಿಗಾಗಿ ಮಹಾರಾಷ್ಟ್ರದ ಕೊಯ್ನ ಮತ್ತು ವಾರಣಾ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುತ್ತಲೇ ಬರಲಾಗುತ್ತಿದೆ. ಕರ್ನಾಟಕವು ಈ ನೀರನ್ನು ಖರೀದಿಸುತ್ತಲೇ ಬಂದಿದೆ. ಆದರೆ, 2016ರಿಂದ ನೀರು ಬಿಡುಗಡೆಗೆ ಒಪ್ಪದ ಮಹಾರಾಷ್ಟ್ರವು ನೀರು ವಿನಿಮಯ ಒಪ್ಪಂದಕ್ಕೆ ಪಟ್ಟು ಹಿಡಿದಿದೆ. ಬೇಸಿಗೆಯಲ್ಲಿ ಕೃಷ್ಣಾ ನದಿಗೆ ಬಿಡಲಾಗುವ ನೀರಿನ ಪ್ರಮಾಣದಲ್ಲಿಯೇ ವಿಜಯಪುರ ಜಿಲ್ಲೆಯ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿಗೆ ನೀರು ಪೂರೈಸಬೇಕೆಂದು ಆಗ್ರಹಿಸುತ್ತಿದೆ. ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಗೆ 6 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದ್ದು ಈ ಯೋಜನೆಯು 3,700 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಈ ಯೋಜನೆಯ ಭಾಗವಾಗಿ ಕಾಲುವೆ, ಉಪಕಾಲುವೆಗಳು ನಿರ್ಮಾಣವಾಗಿವೆ. ಈ ಹಂತದಲ್ಲಿ ಇಲ್ಲಿಂದ ಮಹಾರಾಷ್ಟ್ರದ ಜತ್ತ ಪ್ರದೇಶಕ್ಕೆ ನೀರನ್ನು ಕರ್ನಾಟಕ ಸರ್ಕಾರದ ವೆಚ್ಚದಲ್ಲಿ ಪೂರೈಸಬೇಕೆಂಬುದು ಮಹಾರಾಷ್ಟ್ರದ ವಾದವಾಗಿದೆ. ತಿಕೋಟಾ ನೀರು ವಿತರಣೆ ಕೇಂದ್ರದಿಂದ ಜತ್ತ ಪ್ರದೇಶಕ್ಕೆ ನೀರು ಪೂರೈಸಲು ಅಂದಾಜು 500 ಕೋಟಿ ರೂ.ವೆಚ್ಚವಾಗಲಿದೆ. ತುಬಚಿ ಬಬಲೇಶ್ವರ ನೀರಾವರಿ ಯೋಜನಾ ಪ್ರದೇಶದಲ್ಲಿ ನೀರೆತ್ತುವ ಕೇಂದ್ರವನ್ನು ಕಟ್ಟಿಕೊಳ್ಳಲು ಮಹಾರಾಷ್ಟ್ರಕ್ಕೆ ಜಾಗೆಯನ್ನು ನೀಡಲು ಕರ್ನಾಟಕ ಸಿದ್ಧವಿದೆ. ಜತ್ತ ಪ್ರದೇಶಕ್ಕೆ ಪೂರೈಸಬೇಕಾದ ನೀರನ್ನು ಕೃಷ್ಣಾ ನದಿಗೆ ಬಿಟ್ಟು ಆ ನೀರೆತ್ತುವ ಕೇಂದ್ರದ ಮೂಲಕ ಎತ್ತಿಕೊಂಡು ಜತ್ತ ಪ್ರದೇಶಕ್ಕೆ ಮಹಾರಾಷ್ಟ್ರ ಸರಬರಾಜು ಮಾಡಬೇಕು. ಈ ಎಲ್ಲ ವೆಚ್ಚವನ್ನು ಮಹಾರಾಷ್ಟ್ರವೇ ಭರಿಸಬೇಕು ಎಂಬುದು ಕರ್ನಾಟಕದ ವಾದವಾಗಿದೆ. ಜಿಲ್ಲೆಗಳಲ್ಲಿ 2019ರ ಪರಿಸ್ಥಿತಿಯೇ ಪುನರಾವರ್ತನೆಗೊಂಡರೆ ಅದಕ್ಕೆ ಮಹಾರಾಷ್ಟ್ರವೇ ಹೊಣೆ ಹೊರಬೇಕು. ಈ ಬಗ್ಗೆ ಕರ್ನಾಟಕ ಸರ್ಕಾರ ತಕ್ಷಣ ಮಹಾರಾಷ್ಟ್ರ ಸರ್ಕಾರಕ್ಕೆ ಸೂಕ್ತ ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net