ಬಿಜೆಪಿ ಸರ್ಕಾರದಿಂದ ಅನುದಾನಕ್ಕೆ ತಡೆ

07_01_Mdy_Dr.K.Anadaani
Published on

ಮಂಡ್ಯ: ಎಚ್.ಡಿ.ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ನನ್ನ ಕ್ಷೇತ್ರಕ್ಕೆ ನೀಡಿದ್ದ 1,300 ಕೋಟಿ ರೂ. ಅನುದಾನದಲ್ಲಿ 300 ರಿಂದ 400 ಕೋಟಿ ರೂ.ಗೆ ರಾಜ್ಯ ಬಿಜೆಪಿ ಸರ್ಕಾರ ತಡೆಯೊಡ್ಡಿದೆ ಎಂದು ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಆರೋಪಿಸಿದರು.

ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ 10 ಕೋಟಿ ರೂ., ಹನಿ ನೀರಾವರಿ ಯೋಜನೆಯ 200 ಕೋಟಿ ರೂ ಮತ್ತು ಭಾರೀ ನೀರಾವರಿ ಯೋಜನೆಗೆ ಸೇರಿದ 20 ಕೋಟಿ ರೂ.ಗಳನ್ನು ತಡೆಹಿಡಿಯಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೀರಾವರಿ ಇಲಾಖೆ ಅಧಿಕಾರಿಗಳು ನಿಗದಿತ ಸಮಯದಲ್ಲಿ ಸಮಗ್ರ ಯೋಜನಾ ವರದಿಯನ್ನು ರೂಪಿಸಿಕೊಡದೆ ವಿಳಂಬ ಮಾಡುತ್ತಿದ್ದಾರೆ. ವಿಪಕ್ಷಕ್ಕೆ ಸೇರಿದವನೆಂಬ ಕಾರಣಕ್ಕೆ ನಿರ್ಲಕ್ಷಿಸುತ್ತಿದ್ದಾರೆ. ಶಾಸಕನಾಗಿ ಅಧಿಕಾರಿಗಳ ಮೇಲೆ ಸಾಕಷ್ಟು ಒತ್ತಡ ಹೇರುತ್ತಿದ್ದರೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ನಾಲೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿವೆ. ಕೆಲವೊಂದು ಯೋಜನೆ ವರದಿ ತಯಾರಿಕಾ ಹಂತದಲ್ಲಿವೆ. ಮತ್ತೆ ಕೆಲವು ಟೆಂಡರ್ ಪ್ರಕ್ರಿಯೆ ಹಂತದಲ್ಲಿವೆ. ಬಿಡುಗಡೆಯಾದ ಹಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದೆ ಎಂದರು.
ನಿಯಮ ಉಲ್ಲಂಘನೆಗೆ ಆಕ್ರೋಶ: ಮಳವಳ್ಳಿ ತಾಲೂಕಿನ ಬೆಳಕವಾಡಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಶಾಸಕರಿಗೆ ವಿಷಯ ತಿಳಿಸದೆ ಸ್ಥಳೀಯ ಜಿಪಂ ಸದಸ್ಯರು, ತಾಪಂ ಅಧ್ಯಕ್ಷರು ಕಾಮಗಾರಿಗೆ ಚಾಲನೆ ನೀಡಿದ್ದಾರೆಂದು ಆರೋಪಿಸಿದರು.

ತಾಲೂಕಿನಲ್ಲಿ ನಾನು ಶಿಷ್ಟಾಚಾರ ಉಲ್ಲಂಘಿಸಿದ ಅಥವಾ ಹಿಂದಿನ ಸರ್ಕಾರದ ಕಾಮಗಾರಿಗಳಿಗೆ ತಡೆಯೊಡ್ಡಿರುವ ಒಂದೇ ಒಂದು ನಿದರ್ಶನವನ್ನು ತೋರಿಸಲಿ. ಅದಕ್ಕೆ ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ. ತಪ್ಪಿಗೆ ತಲೆಬಾಗುವುದಕ್ಕೆ ನನಗೆ ಯಾವ ಅವಮಾನವೂ ಇಲ್ಲ. ಆದರೆ, ವಿನಾಕಾರಣ ಕಾಮಗಾರಿಗಳಿಗೆ ತಡೆಯೊಡ್ಡಿದ್ದೇನೆ ಎಂದು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವುದನ್ನು ಸಹಿಸುವುದಿಲ್ಲ. ಒಂದು ವೇಳೆ ದಾಖಲೆ ಇದ್ದರೆ ದೂರು ಕೊಡಲಿ, ನನ್ನ ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲಿ ಎಂದು ಹೇಳಿದರು.

ಶಿಷ್ಟಾಚಾರ ಉಲ್ಲಂಘಿಸಿರುವವರ ವಿರುದ್ಧ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿರುವ ಬಗ್ಗೆ ನನಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿ ಶಾಸಕರ ಅಧಿಕಾರ ಮೊಟಕುಗೊಳಿಸಿರುವುದರ ವಿರುದ್ಧ ದನಿ ಎತ್ತುವುದಾಗಿ ಎಚ್ಚರಿಸಿದರು.
ಮುಖಂಡರಾದ ಎಂ.ಬಿ.ಶ್ರೀನಿವಾಸ್, ಜಯರಾಂ, ಶ್ರೀಧರ್, ಸಿದ್ದಾಚಾರಿ, ಗುರುಸ್ವಾಮಿ, ವಡ್ಡರಹಳ್ಳಿ ಸಿದ್ದರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net