ವೃಕ್ಷಾರೋಪಣಕ್ಕೆ ಸಾಗುವಳಿದಾರರ ತಡೆ

2sor2
ಸೊರಬ ತಾಲೂಕು ಹಲಸಿನಕೊಪ್ಪದಲ್ಲಿ ಜೀವವೈವಿಧ್ಯ ಸಮಿತಿ, ಅರಣ್ಯ ಇಲಾಖೆ, ಅರಣ್ಯ ಸಮಿತಿ ಹಾಗೂ ಗ್ರಾಮಸ್ಥರು ಹಮ್ಮಿಕೊಂಡ ವೃಕ್ಷಾರೋಪಣ ಕಾರ್ಯಕ್ರಮದಲ್ಲಿ ಮಾತಿನ ಚಕಮಕಿ ನಡೆಸಿದ ಸಾಗುವಳಿದಾರರು.
Published on

ಸೊರಬ: ತಾಲೂಕಿನ ಹಲಸಿನಕೊಪ್ಪ ಗ್ರಾಮದಲ್ಲಿ ಜೀವವೈವಿಧ್ಯ ಸಮಿತಿ, ಅರಣ್ಯ ಇಲಾಖೆ, ಅರಣ್ಯ ಸಮಿತಿ ಹಾಗೂ ಗ್ರಾಮಸ್ಥರು ಹಮ್ಮಿಕೊಂಡ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಸಾಗುವಳಿದಾರರು ತಡೆಯೊಡ್ಡಿದರು.
ಉಳವಿ ಹೋಬಳಿಯ ದೂಗೂರು ಗ್ರಾಪಂ ವ್ಯಾಪ್ತಿಯ ಹಲಸಿನಕೊಪ್ಪ ಗ್ರಾಮದ ಸರ್ವೇ ನಂ.4ರ ಗೋಮಾಳ ಪ್ರದೇಶದಲ್ಲಿ ವೃಕ್ಷಾರೋಪಣಕ್ಕೆ ಬುಧವಾರ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದೇ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಗ್ರಾಮದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಬೇಳೂರು ಗ್ರಾಮದ ಅಣ್ಣಪ್ಪ ಅವರು ಸಾಗುವಳಿ ಮಾಡಿಕೊಂಡು ಬಂದಿದ್ದರು. ಈ ವೇಳೆ ಸಾಗುವಳಿ ಪ್ರದೇಶದಲ್ಲಿನ ಅಡಕೆ ಸಸಿಗಳನ್ನು ತೆರವು ಮಾಡಿ, ನೈಸರ್ಗಿಕವಾದ ಕಾಡು ಜಾತಿ ಗಿಡಗಳ ನೆಡಲು ಗ್ರಾಮಸ್ಥರು ಮತ್ತು ವಿವಿಧ ಸಂಘಟನೆಗಳು ಮುಂದಾದ ವೇಳೆ ಗ್ರಾಮಸ್ಥರು ಮತ್ತು ಸಾಗುವಳಿದಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಹುಸೇನ್ ಸರಕಾವಸ್ ಗ್ರಾಮಸ್ಥರ ಮತ್ತು ಸಾಗುವಳಿದಾರರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿ, ಗ್ರಾಮದ ಸರ್ವೇ ನಂ.4ರಲ್ಲಿ 441 ಎಕರೆ ಪ್ರದೇಶವಿದ್ದು ಈ ಪೈಕಿ 233 ಎಕರೆ ಅರಣ್ಯ ಇಲಾಖೆಗೆ ಸೇರಿದೆ. ಉಳಿದಂತೆ ಸುಮಾರು 150 ಎಕರೆ ಗೋಮಾಳ ಪ್ರದೇಶವಿದೆ. ಹಲವು ಸಾಗುವಳಿದಾರರಿಗೆ ಇದೇ ಸರ್ವೇ ನಂಬರ್‌ನಲ್ಲಿ ಮಂಜೂರಾತಿ ಸಹ ದೊರೆತಿದೆ. ಪ್ರಸ್ತುತ ಕೆಲವರದ್ದು ನಮೂನೆ 53ರಲ್ಲಿ ಸಲ್ಲಿಸಿದ ಅರ್ಜಿಗಳು ವಜಾಗೊಂಡಿವೆ. ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೇ ನಡೆಸಲಾಗುವುದು. ಪ್ರಸ್ತುತ ವಿವಾದವಿರುವ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗುವುದು ಮತ್ತು ಈ ಪ್ರದೇಶವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ನಿಷೇಧಿತ ಪ್ರದೇಶವನ್ನಾಗಿ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಪೊಲೀಸರು ಸ್ಥಳದಲ್ಲಿದ್ದ ಗ್ರಾಮಸ್ಥರು ಮತ್ತು ಸಾಗುವಳಿದಾರರನ್ನು ಚದುರಿಸಿದರು.
ಅನಂತ ಹೆಗಡೆ ಅಶೀಸರ, ಗ್ರಾಮ ಸಮಿತಿ ಅಧ್ಯಕ್ಷ ಪರಶುರಾಮಪ್ಪ, ಗ್ರಾಪಂ ಸದಸ್ಯ ಪುಟ್ಟಪ್ಪ ಬರಗಿ, ಪ್ರಮುಖರಾದ ಗಣಪತಿ ಭದ್ರಾಪುರ, ಸವಿತಾ, ಮಮತಾ, ಕೆರಿಯಮ್ಮ, ರೇವತಿ, ಗಿರಿಜಾ, ಆಶಾ, ಗೌರಮ್ಮ, ಪರಿಸರ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಪಾಟೀಲ್, ಪರಿಸರ ಕಾರ್ಯಕರ್ತ ಶ್ರೀಪಾದ ಬಿಚ್ಚುಗತ್ತಿ, ಅರಣ್ಯ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net