ಪಾಂಡವಪುರದಲ್ಲಿ ರೈತ ಸಂಘದಿಂದ ಹೆದ್ದಾರಿ ಸಂಚಾರ ತಡೆ

21-pnp 1a
Published on

ಪಾಂಡವಪುರ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶ ಅವೈಜ್ಞಾನಿಕ ಮತ್ತು ರಾಜ್ಯದ ಜನರ ಪಾಲಿಗೆ ಮರಣ ಶಾಸನವಾಗಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.


ಪಟ್ಟಣದ ಐದು ದೀಪಗಳ ವೃತ್ತದಲ್ಲಿ ಜಮಾವಣೆಗೊಂಡ ರೈತ ಸಂಘದ ನೂರಾರು ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ನಮ್ಮದು, ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ವಿವಾದ ಬಗೆಹರಿಸಬೇಕು, ರಾಜ್ಯ ಸರ್ಕಾರ ಅಣೆಕಟ್ಟೆಯಲ್ಲಿ ಸಂಗ್ರಹವಿರುವ ನೀರಿನ ಬಗ್ಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಲು ವಿಫಲವಾಗಿದೆ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಸಿಡಬ್ಲುೃಎಂಎ ಆದೇಶದಂತೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ತೀರ್ಪು ನೀಡಿದ್ದು, ಈ ತೀರ್ಪು ಅವೈಜ್ಞಾನಿಕವಾಗಿದೆ. ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ನಿಯೋಗ ಕಾವೇರಿ, ಕಬಿನಿ ಜಲಾಶಯಕ್ಕೆ ಭೇಟಿ ನೀಡಿ, ವಾಸ್ತವ ಸ್ಥಿತಿಯನ್ನು ಅರಿತು ಆನಂತರ ತೀರ್ಪು ನೀಡಬೇಕಿತ್ತು. ರಾಜ್ಯ ಸರ್ಕಾರ ಕೂಡ ಪರಿಸ್ಥಿತಿಯನ್ನು ವಿವರಿಸುವಲ್ಲಿ ವಿಫಲವಾಗಿದೆ. ಅಣೆಕಟ್ಟೆಯಲ್ಲಿ ಸದ್ಯ ಲಭ್ಯವಿರುವ ನೀರು ಬೆಂಗಳೂರು ಸೇರಿದಂತೆ ಇತರ ನಗರಗಳಿಗೆ ಕುಡಿಯುವ ನೀರು ಒದಗಿಸಲು ಸಾಕಾಗುವುದಿಲ್ಲ. ಎರಡು ಕೋಟಿ ಜನರಿಗೆ ಜಲಾಶಯದಿಂದ ಕುಡಿಯುವ ನೀರು ಒದಗಿಸಬೇಕು. ಇಂತಹ ಪರಿಸ್ಥಿಯಲ್ಲಿ ತಮಿಳುನಾಡಿಗೆ ನೀರು ಹರಿಸಲು ಹೇಗೆ ಸಾಧ್ಯ ಎಂದು ರೈತ ಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಆಕ್ರೋಶವ್ಯಕ್ತಪಡಿಸಿದರು.


ಕಾವೇರಿ ನದಿ ನೀರಿಗಾಗಿ ರೈತರು ಚಳವಳಿ ಮಾಡುವುದನ್ನೇ ಬಿಡಬೇಕಾಗಿದೆ. ರಾಜ್ಯ ಸರ್ಕಾರ ಇರುವ ನೀರನ್ನೆಲ್ಲ ತಮಿಳುನಾಡಿಗೆ ಬಿಟ್ಟು ಜಲಾಶಯ ಖಾಲಿ ಮಾಡಿದರೆ ರಾಜ್ಯದ ರೈತರು ಎದೆ ಮೇಲೆ ಕಲ್ಲು ಹಾಕಿಕೊಂಡು ಸುಮ್ಮನಿರುತ್ತಾರೆ. ಸರ್ಕಾರ ಕೂಡ ಬೇಜವಾಬ್ದಾರಿತನ ಬಿಡಬೇಕು ಎಂದು ಕಿಡಿಕಾರಿದರು.

ರೈತ ಸಂಘ ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಕಟ್ಟೇರಿ ಮಹದೇವು, ಹರವು ಪ್ರಕಾಶ್, ಯುವರಾಜ, ಬೆಟ್ಟಹಳ್ಳಿ ಕೃಷ್ಣೇಗೌಡ, ರಂಗರವಿ, ಟಿ.ಎಸ್.ಛತ್ರ ಅಶ್ವಥ್, ಚಂದ್ರೆ ರಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net