

ಎಸ್.ಸಿಮಂಜುನಾಥ್, ಹೊಸಕೋಟೆ
ದಾಬಾಸ್ಪೇಟೆಯಿಂದ ಚೆನ್ನೆವರೆಗೆ ನಿರ್ಮಾಣವಾಗುತ್ತಿರುವ ರಸ್ತೆ ರೈತರ ಭೂಮಿಗೆ ದಿಗ್ಬಂಧನ ಹಾಕುತ್ತಿದೆಯೇ? ರೈತರು ತಮ್ಮ ಜಮೀನುಗಳಿಗೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆಯೇ? ಎಂಬ ಆತಂಕ ಎದುರಾಗಿದ್ದು, ಜಡಿಗೇನಹಳ್ಳಿ ಭಾಗದ ರೈತರು ಕಂಗಾಲಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಗೆ ನೂತನವಾಗಿ ಸಂಪರ್ಕ ರಸ್ತೆ ನಿರ್ಮಾಣಗೊಳ್ಳುತಿದ್ದು ಕಾಮಗಾರಿ ಅಂತಿಮ ಹಂತದಲ್ಲಿದೆ, ನಿರ್ಮಾಣಗೊಳ್ಳುತಿರುವ ಜಡಿಗೇನಹಳ್ಳಿ ಭಾಗದ ರಾಷ್ಟ್ರೀಯ ಹೆದ್ದಾರಿ 207 ರಸ್ತೆ ಅಕ್ಕ ಪಕ್ಕದ ಜಮೀನುಗಳ ರೈತರಿಗೆ ಸಂಪರ್ಕ ದಾರಿಯಿಲ್ಲದೆ ರೈತರ ಕೃಷಿಚಟುವಟಿಕೆಗಳಿಗೆ ತಡೆಗೋಡೆ ಬೀಳುವಂತಾಗಿದೆ. 2 ವರ್ಷದ ಹಿಂದೆ ಭೂಸ್ವಾಧಿನಪಡಿಸಿಕೊಂಡು ಚಾಲನೆಗೊಂಡ ಕಾಮಗಾರಿಯಿಂದಾಗಿ ರೈತರ ಭೂಮಿಗಳಿಗೆ ಸಂಪರ್ಕಿಸುವ ರಸ್ತೆಗಳು ಬಂದ್ ಆಗಿವೆ, ರಸ್ತೆ ನಿರ್ಮಾಣ ಸಂದರ್ಭದಲ್ಲಿ ರಸ್ತೆ ಎತ್ತರ ಮಾಡುವ ಸಲುವಾಗಿ ಮಣ್ಣು ತುಂಬಿರುವುದರಿಂದ ಮಳೆ ನೀರು ರೈತರ ಜಮೀನಿನಲ್ಲಿ ನಿಲ್ಲುತ್ತದೆ ಇದರ ಜತೆಗೆ ರಸ್ತೆ ರೈತರ ಜಮೀನುಗಳ ಮಧ್ಯೆ ಹಾದುಹೋಗಿದ್ದು ಹೆದ್ದಾರಿ ಅಕ್ಕ ಪಕ್ಕದ ಜಮೀನುಗಳಿಗೆ ತೆರೆಳಲು ಕಿಲೋಮೀಟರ್ಗಟ್ಟಲೆ ಸುತ್ತಿ ಬರಬೇಕಿದೆ ಸಾವಿರಾರು ರೈತರು ಸಂಕಷ್ಟಕ್ಕೆ ಸಿಲುಕಿದ್ದು ಆತಂಕದ ಕ್ಷಣಗಳನ್ನು ಎದುರಿಸುತ್ತಿದ್ದಾರೆ.
15 ದಿನದ ಗಡುವು : ಇನ್ನು 15 ದಿನಗಳಲ್ಲಿ ಸಂಬಂಧಪಟ್ಟವರು ಈ ಸಮಸ್ಯೆಗೆ ಸೂಕ್ತ ಪರಿಹಾರ ನೀಡದೇ ಹೋದರೆ ಈ ಭಾಗದ ರೈತರು ಉಗ್ರ ಹೋರಾಟದ ಜತೆಗೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ರವಾನಿಸಿದ್ದಾರೆ. ರೈತರಾದ ವರದರಾಜು, ರಾಮಾಂಜಿನಿಗೌಡ, ಕೃಷ್ಣಪ್ಪ, ತ್ಯಾಗರಾಜು, ರವೀಂದ್ರ ಕುಮಾರ್ ಸೇರಿ ನೂರಾರು ರೈತರು ೂಷಿಸಿದ್ದಾರೆ.
ಮಾರುಕಟ್ಟೆಗೆ ಸಾಗಿಸುವುದು ಹೇಗೆ? : ಈ ಭಾಗದ ಜಮೀನುಗಳಲ್ಲಿ ರಾಗಿ, ಹೂವು, ಹಣ್ಣು ತರಕಾರಿ ಹಾಗೂ ಗೋಡಂಬಿ ಹೆಚ್ಚು ಬೆಳೆಯುತ್ತಿದ್ದು ರೈತರು ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ, ಸಂಬಂಧ ಪಟ್ಟ ಮಂತ್ರಿಗಳಿಗೆ ಅನೇಕ ಬಾರಿ ದೂರು ನೀಡಿದ್ದರೂ ಯಾವುದೇ ಪರಿಹಾರ ಸಿಗುತ್ತಿಲ್ಲ. ರಾಜ್ಯದ ಸಂಸದರ ಬಳಿಯೂ ರೈತರು ದೂರು ನೀಡಿದ್ದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ಈ ರಸ್ತೆ ಸಮಸ್ಯೆಗೆ ಸ್ಪಂದಿಸದಿರುವ ಬಗ್ಗೆ ನ್ಯಾಯಾಲಯದಲ್ಲೂ ದೂರು ದಾಖಲಿಸಲಾಗಿದೆ. ರೈತರ ಜಮೀನಿಗೆ ಮೂರು ತಿಂಗಳಲ್ಲಿ ರಸ್ತೆ ನಿರ್ಮಾಣ ಮಾಡಿಕೊಡಬೇಕೆಂದು ನ್ಯಾಯಾಲಯ ಅಧಿಕಾರಿ ವರ್ಗಕ್ಕೆ ಆದೇಶವನ್ನೂ ನೀಡಿದೆ, ಆದರೆ ಈವರೆಗೆ ಯಾವುದೇ ಪ್ರಗತಿ ಇಲ್ಲವಾಗಿದೆ, ಅಧಿಕಾರಿಗಳು ರಸ್ತೆ ಪೂರ್ಣಗೊಳಿಸಿ ಉದ್ಘಾಟಿಸುವ ಉತ್ಸಾಹದಲ್ಲಿದ್ದಾರೆ. ರೈತರಿಗೆ ಯಾವುದೇ ಮಾಹಿತಿ ನೀಡದೆ ರಸ್ತೆಗೆ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ, ನ್ಯಾಯಾಲಯದ ಆದೇಶವನ್ನೂ ಪಾಲಿಸದಿರುವ ಬಗ್ಗೆಯೂ ದೂರು ದಾಖಲಿಸಲಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಜಡಿಗೇನಹಳ್ಳಿ ಭಾಗದ ಸಾವಿರಾರು ರೈತರಿಗೆ ಸಂಕಷ್ಟ ಎದುರಾಗಿದೆ, ಹೆದ್ದಾರಿ ನಿರ್ಮಾಣದಿಂದ ಜಮೀನುಗಳಿಗೆ ಹೋಗಿಬರುವ ದಾರಿಯೇ ಇಲ್ಲದಂತಾಗಿದೆ ತಡೆಗೋಡೆ ನಿರ್ಮಾಣದಿಂದ ನಮ್ಮ ಜಮೀನುಗಳಿಗೆ ದಿಗ್ಬಂಧನ ಹಾಕಿದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. > ವರದರಾಜು ರೈತ ಮುಖಂಡ ಜಡಿಗೇನಹಳ್ಳಿ