ಯತ್ನಾಳ್ ವಿರುದ್ಧ ಬ್ಲಾಕ್ ಕಾಂಗ್ರೆಸ್ ದೂರು

block congs
Published on

ಮಡಿಕೇರಿ: ಕಲಬುರ್ಗಿಯಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಅವರು ಮುಸಲ್ಮಾನರ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಮತ್ತು ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಜಿಲ್ಲಾಧಿಕಾರಿ ವೆಂಕಟ್ ರಾಜಾ ದೂರು ನೀಡಿದ್ದಾರೆ.


ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಎಂ.ಎ.ಕಲೀಲ್ ಬಾಷಾ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮಡಿಕೇರಿ ಬ್ಲಾಕ್ ಅಧ್ಯಕ್ಷ ಕೆ.ಜಿ.ಪೀಟರ್, ಉಪಾಧ್ಯಕ್ಷ ಎಂ.ಬಿ.ಕೌಸರ್, ಖಜಾಂಚಿ ಎಂ.ಎಚ್.ಅಜೀಜ್ ಹಾಗೂ ನಗರ ಸಂಘಟನಾ ಕಾರ್ಯದರ್ಶಿ ಎಂ.ಎಂ.ಅಬ್ದುಲ್ ಅಜೀಜ್ ಅವರುಗಳು ದೂರು ನೀಡಿ ಯತ್ನಾಳ್ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವುದರಿಂದ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.


ಮುಸ್ಲಿಮರನ್ನು ಕಲ್ಲಿನಿಂದ ಹೊಡೆಯಿರಿ ಎಂದು ಪ್ರಚೋದನಾಕಾರಿ ಭಾಷಣ ಮಾಡಿರುವ ಯತ್ನಾಳ್ ಅವರು ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ನಡುವೆ ದ್ವೇಷವನ್ನು ಬಿತ್ತುತ್ತಿದ್ದಾರೆ. ಚುನಾವಣೆಗೂ ಮೊದಲು ಕೋಮು ಸೌಹಾರ್ಧತೆಗೆ ಭಂಗ ತರುವ ಮತ್ತು ನ್ಯಾಯಯುತ ಚುನಾವಣೆ ನಡೆಯದಂತೆ ಮಾಡುವ ಪ್ರಯತ್ನದಲ್ಲಿದ್ದಾರೆ. ಕಾನೂನು ಬಾಹಿರ ಹೇಳಿಕೆಯ ಪ್ರತಿಗಳನ್ನು ಯತ್ನಾಳ್‌ರವರ ಹಿಂಬಾಲಕರು ಮಡಿಕೇರಿಯಲ್ಲಿ ವ್ಯಾಪಕವಾಗಿ ಹಂಚುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿಯೂ ಪ್ರಸಾರ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.


ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತ ಕೇಸು ದಾಖಲಿಸಲು ಆದೇಶವಿದೆ. ಪ್ರಚೋದನಾಕಾರಿ ಭಾಷಣದ ಮೂಲಕ ಯತ್ನಾಳ್‌ರವರು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಶಿಕ್ಷೆಗೆ ಗುರಿ ಪಡಿಸಬೇಕೆಂದು ಪ್ರಮುಖರು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net