ರಾಜ್ಯಪಾಲರ ನಡೆಗೆ ಬ್ಲಾಕ್ ಕಾಂಗ್ರೆಸ್ ಆಕ್ಷೇಪ

19sri-2 (1)
ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Published on

ಶೃಂಗೇರಿ: ಸಿಎಂ ಸಿದ್ಧರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಕುರುಬಕೇರಿ ಸರ್ಕಲ್ ಸಮೀಪ ಪ್ರತಿಭಟನೆ ನಡೆಸಿದರು.
ಮಲೆನಾಡು ಜನಪರ ಒಕ್ಕೂಟದ ಮುಖಂಡ ಅನಿಲ್ ಹೊಸಕೊಪ್ಪ ಮಾತನಾಡಿ, ರಾಜ್ಯಪಾಲರು ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಜನಪರ ಕಾಳಜಿ ಇರುವ ಸಿಎಂ ಸಿದ್ಧರಾಮಯ್ಯ ಅವರ ಮೇಲೆ ಕಾನೂನು ಸಮರಕ್ಕೆ ಮುಂದಾಗಿರುವುದು ವಿಷಾದನೀಯ. ಸಮಾಜದ ಕಟ್ಟಕಡೆಯ ಜನರಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ಮುಖ್ಯಮಂತ್ರಿಗಳ ಉತ್ತಮ ಕಾರ್ಯ ಸಾಧನೆ ಕಂಡು ವಿರೋಧ ಪಕ್ಷದವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಅವರು ತಮ್ಮ ಸ್ಥಾನಕ್ಕೆ ಗೌರವಯುತವಾಗಿ ವರ್ತಿಸುವಂತೆ ಕಾರ್ಯ ನಿರ್ವಹಿಸಬೇಕು. ಮುಡಾ ಹಗರಣವನ್ನು ಅತಿಯಾಗಿ ವಿಜೃಂಭಿಸುವ ರಾಜಕೀಯ ನಾಯಕರು ತಮ್ಮ ಆಡಳಿತ ಅವಧಿಯಲ್ಲಿ ಆದ ಹಗರಣದ ಕುರಿತು ಪ್ರಾಮಾಣಿಕವಾಗಿ ಹೇಳಿಕೆ ನೀಡಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಮಾತನಾಡಿ, ರಾಜ್ಯದಲ್ಲಿ ಬಡವರಿಗೆ ಸಾಕಷ್ಟು ಸಹಕಾರ ನೀಡುತ್ತಿರುವ ಸಿಎಂ ಸಿದ್ಧರಾಮಯ್ಯ ಜನ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಸಿಎಂಗೆ ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಮುಂದಿಟ್ಟುಕೊಂಡು ನಿರಂತರ ತೊಂದರೆ ನೀಡುತ್ತಿದೆ. ವಿರೋಧ ಪಕ್ಷದವರು ಸಿದ್ಧರಾಮಯ್ಯ ವಿರುದ್ಧ ಹುನ್ನಾರ ಮಾಡುತ್ತಿದ್ದು ಇದನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂದರು.
ಪಪಂ ಸದಸ್ಯ ರಫೀಕ್ ಅಹಮದ್, ಮುಖಂಡರಾದ ಸೌಭಾಗ್ಯ ಗೋಪಾಲನ್,ರಾಜಕುಮಾರ್ ಹೆಗಡೆ, ಸಂತೋಷ್ ಕಾಳ್ಯ, ರಮೇಶ್ ಭಟ್, ಕಲ್ಕುಳ್ಳಿ ವೆಂಕಟೇಶ್, ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಪರಿಯಪ್ಪ, ಸದಸ್ಯ ತ್ರಿಮೂರ್ತಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net