

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಜಾರಕಿಹೊಳಿ ಸಹೋದರರು ಯಾವತ್ತೂ ಜಾತಿ ರಾಜಕೀಯ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಜನರ ಆಶೀರ್ವಾದದಿಂದ ಸಾರ್ವತ್ರಿಕ ಚುನಾವಣೆಗಳಲ್ಲಿ ಆಯ್ಕೆಯಾಗಿದ್ದೇವೆ. ಹೀಗಾಗಿ ವಿರೋಧಿಗಳ ಆರೋಪದಲ್ಲಿ ಸತ್ಯಾಂಶ ಇಲ್ಲ ಎಂದು ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಹುಕ್ಕೇರಿ ತಾಲೂಕಿನ ಎಲೆಮುನೋಳಿ ಗ್ರಾಮದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಲ್ಪ ಸಮುದಾಯದಿಂದ ದಿಂದ ಬೆಳೆದು ಬಂದಿರುವ ಜಾರಕಿಹೊಳಿ ಕುಟುಂಬಕ್ಕೆ ಜಾತಿ ಎನ್ನುವ ಪದವೇ ಗೊತ್ತಿಲ್ಲ. ನಮಗೆ ಎಲ್ಲ ಜಾತಿ, ವರ್ಗದ ಜನರ ಆಶೀರ್ವಾದ ಬೇಕು. ನಾವು ಸೇವೆ ಮಾಡಲು ಸದಾ ಬದ್ಧರಾಗಿದ್ದೇವೆ ಎಂದು ಹೇಳಿದರು.
ನಮ್ಮ ಸಮಾಜದವರು ಕೇವಲ 3 ರಿಂದ 5 ಸಾವಿರ ಜನರಿದ್ದಾರೆ.ಲಿಂಗಾಯತರು, ಕುರುಬರು, ಉಪ್ಪಾರರು, ಮುಸ್ಲಿಮರು, ಪ.ಜಾತಿ, ಹೀಗೇ ವಿವಿಧ ಜಾತಿ ವರ್ಗದವರು ಆಶೀರ್ವಾದದಿಂದ ನಮ್ಮ ಕುಟುಂಬದಲ್ಲಿ ಏಕಕಾಲಕ್ಕೆ ಮೂವರು ಶಾಸಕರು, ತಲಾ ಒಬ್ಬರು ವಿಪ ಸದಸ್ಯರು ಮತ್ತು ಸಂಸದರನ್ನು ಹೊಂದಿದ್ದೇವೆ. ಇದು ದೇಶದಲ್ಲಿಯೇ ದಾಖಲೆಯಾಗಿದೆ. ನಾವು ಕೂಡ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಎಲ್ಲ ಸಮಾಜಗಳ ಮುಖಂಡರುಗಳಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಥಾನ- ಮಾನ ನೀಡಿದ್ದೇವೆ ಎಂದರು.
ಕಳೆದ ಹತ್ತು ವರ್ಷಗಳಿಂದ ಬಿಡಿಸಿಸಿ ಬ್ಯಾಂಕಿನ ಅಧಿಕಾರ ಚುಕ್ಕಾಣಿ ಹಿಡಿಯಲು ಜಾರಕಿಹೊಳಿ ಸಹೋದರರು ಬೇಕಾದರು. ಆಗ, ನಮಗೆಲ್ಲಾ ಒಳ್ಳೆಯವರು ಅಮದರು. ಇದೀಗ ನಾವು ಬೇಡವಾಗಿದ್ದ ಕಾರಣಕ್ಕೆ ಜಾತಿ ಮುಂದೆ ಮಾಡುತ್ತಿದ್ದಾರೆ. ನಮ್ಮನ್ನು ಲಿಂಗಾಯತ ಸಮಾಜದ ವಿರೋಧಿಯಂತೆ ಬಿಂಬಿಸುತ್ತಿದ್ದಾರೆ. ನಮ್ಮ ಕುಟುಂಬಕ್ಕೆ ಯಾರಿಗೂ ಕೆಡಕು ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ 30 ವರ್ಷಗಳಿಂದ ವಿದ್ಯುತ್ ಸಹಕಾರಿ ಸಂಘ ಕತ್ತಿಯವರ ಹಿಡಿತದಲ್ಲಿದೆ. ಗ್ರಾಹಕರಿಗೆ ಸಮರ್ಪಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿಲ್ಲ. ಹೀಗಾಗಿ ಜನರು ಅಕ್ರೋಶಗೊಂಡಿದ್ದಾರೆ. ರೈತರ ಹಿತಕ್ಕಾಗಿ ನಾವುಗಳು ಸದಾ ಬದ್ಧರಿದ್ದೇವೆ. ನಮಗೂ ಒಂದು ಬಾರೀ ಅವಕಾಶವನ್ನು ನೀಡಿ. ನಿರೀಕ್ಷೆಗಿಂತಲೂ ಹೆಚ್ಚಿನ ಕೆಲಸ ಮಾಡಿ ತೋರಿಸುತ್ತೇವೆ. ಮೊದಲೇ ನಷ್ಟದಲ್ಲಿರುವ ಈ ಸಂಸ್ಥೆಯ ಅಭಿವೃದ್ಧಿಗೆ ಸರ್ಕಾರದ ನೆರವು ಅಗತ್ಯವಿದೆ ಎಂದರು.
ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಕಳೆದ ಆರು ತಿಂಗಳಿನಿಂದ ಹುಕ್ಕೇರಿ ತಾಲೂಕಿನ ಸಹಕಾರಿ ಚಿತ್ರಣವೇ ಬದಲಾಗಿದೆ. ಯಾವ ಭಯವಿಲ್ಲದೇ ಮತವನ್ನು ಚಲಾಯಿಸಿ. ನಿಮ್ಮ ರಕ್ಷಣೆಗೆ ನಾವೆಲ್ಲರೂ ನಿಲ್ಲುತ್ತೇವೆ. ಸಹಕಾರ ಸಂಘಗಳು ಉಳಿಯಬೇಕು. ಆ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ನಾಯಕರು ಪಕ್ಷ, ಜಾತಿ ಬೇಧ ಮರೆತು ಜನರ ಒಳತಿಗಾಗಿ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮನ್ನು ಬೆಂಬಲಿಸಿದರೆ ನಿಮಗೆ ಲಾಭವಾಗುತ್ತದೆ. ನೀವು ಹೇಳುವ ಕೆಲಸಗಳು 24 ತಾಸಿನಲ್ಲಿ ಆಗುತ್ತವೆ. ನಿರಂತರ ಜ್ಯೋತಿ, ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳು ರೈತರಿಗೆ ತ್ವರಿತ ಗತಿಯಲ್ಲಿ ಸಿಗಲಿವೆ ಎಂದವರು ಹೇಳಿದರು.
ಮಾಜಿ ಸಚಿವ ಶಶಿಕಾಂತ ನಾಯಿಕ, ವಿದ್ಯುತ ಸಹಕಾರಿ ಸಂಘದ ಅಧ್ಯಕ್ಷ ಜಯಗೌಡ ಪಾಟೀಲ, ಸಂಕೇಶ್ವರ ಹೀರಾ ಶುಗರ್ಸ ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ಅಶೋಕ ಪಟ್ಟಣಶೆಟ್ಟಿ, ರವಿ ಹಿಡ್ಕಲ್, ರಾಜೇಂದ್ರ ಅಂಕಲಗಿ, ಸುರೇಶ ದೊಡ್ಡಲಿಂಗನವರ, ಬಸನಗೌಡ ಮೆಗನ್ನವರ ಇತರರಿದ್ದರು.